‘ಅಮೆರಿಕವು ಅರ್ಹತೆ ಕಡಿಮೆಯಿರುವವರ ಕೈಯಲ್ಲಿದೆ’: ಟ್ರಂಪ್ ಸರ್ಕಾರದ ವಿರುದ್ಧ ನಟ ಜಾರ್ಜ್ ಕ್ಲೂನಿ ವಾಗ್ದಾಳಿ

Screengrab/x.com/OliLondonTV
ವೆನಿಸ್, ಸೆ. 2: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದಡಿ ಅಮೆರಿಕವು ತನ್ನ ಇತಿಹಾಸದ ‘ದುರದೃಷ್ಟಕರ’ ಅವಧಿಯೊಂದನ್ನು ಎದುರಿಸುತ್ತಿದೆ ಎಂದು ನಟ ಜಾರ್ಜ್ ಕ್ಲೂನಿ ಬುಧವಾರ ಹೇಳಿದ್ದಾರೆ.
ವೆನಿಸ್ ಚಲನಚಿತ್ರೋತ್ಸವದ ಉದ್ಘಾಟನಾ ದಿನದಂದು ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಕ್ಲೂನಿ, ಅಮೆರಿಕ ಸರ್ಕಾರದ ಬಗ್ಗೆ ‘ನಾಚಿಕೆಯಾಗುತ್ತಿದೆ’ ಎಂದರು. ತಮ್ಮ ವೃತ್ತಿಜೀವನ, ಕೃತಕ ಬುದ್ಧಿಮತ್ತೆ, ಹವಾಮಾನ ಬದಲಾವಣೆ ಮತ್ತು ಚಲನಚಿತ್ರ ನಿರ್ಮಾಣ ಉದ್ಯಮದ ಸ್ಥಿತಿಗತಿ ಕುರಿತು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ನಾವು ದುರದೃಷ್ಟಕರ ಸಮಯದಲ್ಲಿದ್ದೇವೆ. ಅದನ್ನು ಹೇಳುವುದು ಕೂಡ ತಗ್ಗುನುಡಿಯಾಗುತ್ತದೆ’ ಎಂದು ಈ ಹಿಂದೆ ಟ್ರಂಪ್ ಆಡಳಿತವನ್ನು ಟೀಕಿಸಿದ್ದ ಕ್ಲೂನಿ ಹೇಳಿದರು.
ಕಡಿಮೆ ಅರ್ಹತೆ ಹೊಂದಿರುವವರು ಆಡಳಿತ ನಡೆಸುವ ಪರಿಸ್ಥಿತಿಯನ್ನು ಸೂಚಿಸುವ ‘ಕಾಕಿಸ್ಟೋಕ್ರಸಿ (Kakistocracy)’ ಎಂಬ ಪದವನ್ನು ಉಲ್ಲೇಖಿಸಿದ ಅವರು, ‘ಅಮೆರಿಕವು ಈಗ ಅರ್ಹತೆ ಕಡಿಮೆಯಿರುವವರ ಕೈಯಲ್ಲಿದೆ ಎಂದು ನಾನು ಭಾವಿಸುತ್ತೇನೆ. ಆದರೆ ನಾವು ಈ ಪರಿಸ್ಥಿತಿಯನ್ನು ದಾಟುತ್ತೇವೆ’ ಎಂದರು.
ನವೆಂಬರ್ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳು ಟ್ರಂಪ್ ಸರ್ಕಾರದ ಅಧಿಕಾರಕ್ಕೆ ಕಡಿವಾಣ ಹಾಕಲು ನೆರವಾಗಬಹುದು ಎಂದು ಅವರು ಹೇಳಿದರು.
‘ಅದೃಷ್ಟವಿದ್ದರೆ 2028ರಲ್ಲಿ ನಾವು ಸ್ವಲ್ಪ ಸಾಮಾನ್ಯ ಸ್ಥಿತಿಗೆ ಮರಳುತ್ತೇವೆ’ ಎಂದು ಕ್ಲೂನಿ ಹೇಳಿದರು.
ತಾನು ಆಶಾವಾದಿ ಎಂದು ಹೇಳಿಕೊಂಡ ಅವರು, ಅಮೆರಿಕವು ಈ ಹಿಂದೆಯೂ ಹಲವು ಕಠಿಣ ಸಮಯಗಳನ್ನು ಎದುರಿಸಿದೆ ಎಂದು ನೆನಪಿಸಿದರು.
‘1968ರಲ್ಲಿ ಅಮೆರಿಕದ ಪ್ರತಿಯೊಂದು ನಗರವೂ ಬೆಂಕಿಯಲ್ಲಿ ಮುಳುಗಿದ್ದ ಸಮಯವನ್ನು ನೆನಪಿಸಿಕೊಳ್ಳುವಷ್ಟು ನನಗೆ ವಯಸ್ಸಾಗಿದೆ. ಅದೇ ವರ್ಷ ಮಾರ್ಟಿನ್ ಲೂಥರ್ ಕಿಂಗ್ ಮತ್ತು ಬಾಬಿ ಕೆನಡಿ ಅವರನ್ನು ಕಳೆದುಕೊಂಡೆವು. ಸಾಕಷ್ಟು ಹಿಂಸಾಚಾರವೂ ನಡೆದಿತ್ತು. ಕ್ಯಾಪಿಟಲ್ ಕಟ್ಟಡದ ಸುತ್ತಲೂ ಟ್ಯಾಂಕ್ ಗಳನ್ನು ನಿಯೋಜಿಸಲಾಗಿತ್ತು’ ಎಂದು ಅವರು ಹೇಳಿದರು.
‘ನಮಗೆ ಈ ಹಿಂದೆಯೂ ಹಲವು ಕಠಿಣ ಸಮಯಗಳು ಎದುರಾಗಿವೆ. ಈಗಿನ ಸಮಯವೂ ಅಂತಹದ್ದರಲ್ಲಿ ಒಂದು’ ಎಂದರು.
ಹೆಗ್ಸೆತ್ ಪೋಸ್ಟ್ ಗೂ ಕ್ಲೂನಿ ಆಕ್ಷೇಪ
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಈ ವಾರ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದ ಪೋಸ್ಟ್ ಬಗ್ಗೆಯೂ ಕ್ಲೂನಿ ಆಕ್ಷೇಪ ವ್ಯಕ್ತಪಡಿಸಿದರು.
ಯುವ ಶಿಬಿರವೊಂದರಲ್ಲಿ ಪದಕ ಪ್ರದಾನ ಮಾಡುತ್ತಿದ್ದ ಕೆನಡಾದ ಮಹಿಳಾ ಸೈನಿಕರ ದೇಹದ ಗಾತ್ರವನ್ನು ಗೇಲಿ ಮಾಡುವ ರೀತಿಯಲ್ಲಿ ಹೆಗ್ಸೆತ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು ಎಂದು ಕ್ಲೂನಿ ಹೇಳಿದರು.
‘ಇಂತಹ ಸಂದರ್ಭದಲ್ಲಿ ಸಭ್ಯತೆ ಎಲ್ಲಿದೆ ಎಂಬುದೇ ಅರ್ಥವಾಗುತ್ತಿಲ್ಲ. ಈ ಎಲ್ಲದರ ಬಗ್ಗೆ ನನಗೆ ನಾಚಿಕೆಯಾಗುತ್ತದೆ. ಆದರೆ ಅಮೆರಿಕ ಈ ಪರಿಸ್ಥಿತಿಯಿಂದ ಹೊರಬರುತ್ತದೆ. ಅಂತಿಮವಾಗಿ ನಾವು ಇನ್ನಷ್ಟು ಉತ್ತಮ ಸ್ಥಿತಿಗೆ ತಲುಪುತ್ತೇವೆ’ ಎಂದು ಕ್ಲೂನಿ ವಿಶ್ವಾಸ ವ್ಯಕ್ತಪಡಿಸಿದರು.
ವೆನಿಸ್ ಚಲನಚಿತ್ರೋತ್ಸವದ ಉದ್ಘಾಟನಾ ದಿನದಂದು ಕ್ಲೂನಿ ಅವರಿಗೆ ವೃತ್ತಿಜೀವನದ ಸಾಧನೆಗಾಗಿ ‘ಗೋಲ್ಡನ್ ಲಯನ್’ ಪ್ರಶಸ್ತಿ ನೀಡಲಾಗುತ್ತಿದೆ.






