America | ಟೈಮ್ಸ್ ಸ್ಕ್ವೇರ್ನಲ್ಲಿ ಚಾಕು ದಾಳಿ : ಓರ್ವ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ; ಆರೋಪಿ ಮಹಿಳೆಯನ್ನು ಗುಂಡಿಕ್ಕಿ ಕೊಂದ ಪೋಲೀಸರು

Photo Credit : timesofindia
ವಾಷಿಂಗ್ಟನ್ : ನ್ಯೂಯಾರ್ಕ್ ನಗರದ ಜನನಿಬಿಡ ಟೈಮ್ಸ್ ಸ್ಕ್ವೇರ್ನಲ್ಲಿ ಮಹಿಳೆಯೊಬ್ಬರು ಇಬ್ಬರಿಗೆ ಚಾಕುವಿನಿಂದ ಇರಿದಿದ್ದಾರೆ. ದಾಳಿಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿ ನಡೆಸಿದ ಮಹಿಳೆಯನ್ನು ತಡೆಯಲು ಮುಂದಾದ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
42ನೇ ರಸ್ತೆ ಮತ್ತು ಸೆವೆಂತ್ ಅವೆನ್ಯೂ ಬಳಿ ಸೋಮವಾರ ಈ ಘಟನೆ ನಡೆದಿದೆ. ಮಾನಸಿಕವಾಗಿ ಅಸ್ವಸ್ಥಳಂತೆ ಕಂಡುಬಂದ ಆರೋಪಿ ಮಹಿಳೆ, ದಾಳಿ ನಡೆಸಿದ ಬಳಿಕ ಉತ್ತರ ದಿಕ್ಕಿನ ಪೊಲೀಸ್ ಠಾಣೆಯತ್ತ ಓಡಿದ್ದಳು. ಅಲ್ಲಿ ಪೊಲೀಸರು ಆಕೆಯನ್ನು ತಡೆದಿದ್ದಾರೆ.
ಆಕೆಯ ಕೈಯಲ್ಲಿ ಎರಡು ದೊಡ್ಡ ಚಾಕುಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ಚಿತ್ರೀಕರಿಸಿದ ವಿಡಿಯೋದಲ್ಲಿ, ಪೊಲೀಸರು ಮಹಿಳೆಯನ್ನು ಸುತ್ತುವರಿದು ಶರಣಾಗುವಂತೆ ಸೂಚಿಸಿರುವುದು ಕಂಡುಬಂದಿದೆ. ಬಳಿಕ ವಿದ್ಯುತ್ ಶಾಕ್ ಗನ್ ಬಳಸಿ ಆಕೆಯನ್ನು ಬಂಧಿಸಲು ಪೊಲೀಸರು ಯತ್ನಿಸಿದ್ದಾರೆ. ಆದರೆ, ಆರೋಪಿ ಮಹಿಳೆ ಚಾಕುಗಳನ್ನು ಝಳಪಿಸುತ್ತಾ ಪೊಲೀಸರತ್ತಲೇ ನುಗ್ಗಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಗುಂಡು ಹಾರಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಚಾಕು ಇರಿತಕ್ಕೊಳಗಾದ ಸಂತ್ರಸ್ತರ ಪೈಕಿ ಓರ್ವ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಗಳು, ಈ ದಾಳಿಗೂ ಭಯೋತ್ಪಾದನೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆರೋಪಿ ಮಹಿಳೆ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಂತೆ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳವನ್ನು ಪೊಲೀಸರು ಸುತ್ತುವರಿದಿದ್ದು, ಸೆವೆಂತ್ ಅವೆನ್ಯೂ ರಸ್ತೆಯ ಒಂದು ಭಾಗವನ್ನು ಬಂದ್ ಮಾಡಿ ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕರು ಆ ಪ್ರದೇಶಕ್ಕೆ ತೆರಳದಂತೆ ಪೊಲೀಸರು ಸೂಚಿಸಿದ್ದಾರೆ.






