ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ಮತ್ತೆ ವಾಯುದಾಳಿ ನಡೆಸಿದ ಅಮೆರಿಕ

PC: x.com/CENTCOM
ವಾಷಿಂಗ್ಟನ್: ಸಿರಿಯಾದಲ್ಲಿ ಐಸಿಸ್ ಉಗ್ರರ ತಾಣಗಳನ್ನು ಗುರಿ ಮಾಡಿ ಅಮೆರಿಕ ಸೇನೆ ಹಾಗೂ ಮಿತ್ರಪಡೆಗಳು ಶನಿವಾರ ದೊಡ್ಡ ಪ್ರಮಾಣದ ವಾಯುದಾಳಿ ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಪ್ರಕಟಿಸಿದೆ. ಐಸಿಸ್ ಉಗ್ರರು ಕಳೆದ ತಿಂಗಳು ದಾಳಿ ನಡೆಸಿ ಮೂವರು ಅಮೆರಿಕನ್ನರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ವಿವರಿಸಿದೆ.
ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12.30ರ ವೇಳೆಗೆ ಈ ದಾಳಿ ನಡೆಸಲಾಗಿದ್ದು, ಅಮೆರಿಕದ ಸೇನೆಯ ಜತೆಗೆ ಪಾಲುದಾರ ದೇಶಗಳ ಸೇನೆ ಕೂಡಾ ದೇಶಾದ್ಯಂತ ಹಲವು ಐಸಿಸ್ ತಾಣಗಳ ಮೇಲೆ ದಾಳಿ ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಸ್ಪಷ್ಟಪಡಿಸಿದೆ.
''ಆಪರೇಷನ್ ಹಾಕ್ಐ ಸ್ಟ್ರೈಕ್'' ಹೆಸರಿನಲ್ಲಿ ನಡೆದ ಕಾರ್ಯಾಚರಣೆಯ ಮುಂದವರಿದ ಭಾಗವಾಗಿ ಈ ದಾಳಿ ನಡೆದಿದೆ. 2025ರ ಡಿಸೆಂಬರ್ 19ರಂದು ಡೊನಾಲ್ಡ್ ಟ್ರಂಪ್ ನಿರ್ದೇಶನದಲ್ಲಿ ದಾಳಿ ನಡೆದಿತ್ತು. ಅಮೆರಿಕ ಹಾಗೂ ಸಿರಿಯಾ ಪಡೆಗಳನ್ನು ಗುರಿ ಮಾಡಿ 2025ರ ಡಿಸೆಂಬರ್ 13ರಂದು ಸಿರಿಯಾದ ಪಲ್ಮ್ಯಾರಾದಲ್ಲಿ ಐಸಿಸ್ ಉಗ್ರರು ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ದಾಳಿಯಲ್ಲಿ ಇಬ್ಬರು ಅಮೆರಿಕನ್ ಸೈನಿಕರು ಮತ್ತು ಒಬ್ಬ ಭಾಷಾಂತರಕಾರ ಹತರಾಗಿದ್ದರು. ಲೋವಾ ನ್ಯಾಷನಲ್ ಗಾರ್ಡ್ ನ ಇತರ ಮೂವರು ಗಾಯಗೊಂಡಿದ್ದರು.







