ಅಮೆರಿಕ: ವರ್ಣದ್ವೇಷದ ದಾಳಿ; ಮೂವರು ಕರಿಯರ ಹತ್ಯೆ

ಫ್ಲೋರಿಡಾ: ಸುಮಾರು 20 ವರ್ಷದ ಬಿಳಿಯ ವ್ಯಕ್ತಿಯೊಬ್ಬ ಇಲ್ಲಿನ ಡಾಲರ್ ಜನರ್ ಸ್ಟೋರ್ನಲ್ಲಿ ಶನಿವಾರ ಮೂರು ಮಂದಿ ಕರಿಯರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಕರಿಯರ ಪ್ರಾಬಲ್ಯದ ಈ ಪ್ರದೇಶದಲ್ಲಿ ಈ ದಾಳಿ ನಡೆದಿರುವುದು ದೇಶದಲ್ಲಿ ಬಲವಾಗಿರುವ ವರ್ಣದ್ವೇಷದ ಮನಸ್ಥಿತಿಗೆ ನಿದರ್ಶನವಾಗಿದೆ. ಹಂತಕ ತಾನೂ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ.
ಆತ ಕಪ್ಪು ವರ್ಣದ ಜನರನ್ನು ದ್ವೇಷಿಸುತ್ತಿದ್ದ. ಆದರೆ ಈತ ಯಾವುದೇ ದೊಡ್ಡ ಸಂಘಟನೆಯ ಜತೆ ಸಂಪರ್ಕ ಹೊಂದಿದ್ದ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಆಡಳಿತಾಧಿಕಾರಿಯೊಬ್ಬರು ವಾಟರ್ಸ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಗ್ಲೋಕ್ ಹ್ಯಾಂಡ್ ಗನ್ ಮತ್ತು ಎಆರ್-15 ಸೆಮಿ ಆಟೊಮ್ಯಾಟಿಕ್ ರೈಫಲ್ ಹೊಂದಿದ್ದ ಈ ಆರೋಪಿಯ ಆಯುಧದಲ್ಲಿ ಸ್ವಸ್ತಿಕದ ಚಿಹ್ನೆ ಇತ್ತು. ಜಾಕ್ಸನ್ ಎಂಬಲ್ಲಿ ವಿಡಿಯೊ ಗೇಮ್ ಟೂರ್ನಿಯ ವೇಳೆ ಗುಂಡಿನ ದಾಳಿ ನಡೆಸಿ ಇಬ್ಬರನ್ನು ಹತ್ಯೆ ಮಾಡಿ ತಾನೂ ಗುಂಡು ಹಾರಿಸಿಕೊಂಡು ಮೃತಪಟ್ಟ ಘಟನೆಯ ಐದನೇ ವರ್ಷಾಚರಣೆಗಾಗಿ ಈ ದಾಳಿ ನಡೆಸುತ್ತಿರುವುದಾಗಿ ಈತ ಬರೆದಿರುವ ಪತ್ರ ತನಿಖಾಧಿಕಾರಿಗಳಿಗೆ ಸಿಕ್ಕಿದೆ.
ಕಪ್ಪು ವರ್ಣೀಯರ ವಿಶ್ವವಿದ್ಯಾನಿಲಯ ಎಂದೇ ಕರೆಸಿಕೊಂಡಿರುವ ಎಡ್ವರ್ಡ್ ವಾಟರ್ಸ್ ಯುನಿವರ್ಸಿಟಿ ಪಕ್ಕ ಡಾಲರ್ ಜನರಲ್ ಸ್ಟೋರ್ ಬಳಿ ಈ ಘಟನೆ ನಡೆದಿದೆ. ದಾಳಿಕೋರ ಪಕ್ಕದ ಕ್ಲೇ ಕೌಂಟಿಯವನು. ಈ ದಾಳಿ ನಡೆಸುವ ಮುನ್ನ ತನ್ನ ತಂದೆಗೆ ಸಂದೇಶ ರವಾನಿಸಿ ಕಂಪ್ಯೂಟರ್ನಲ್ಲಿ ಇದನ್ನು ನೋಡುವಂತೆ ಕೋರಿದ್ದಾನೆ. ತಕ್ಷಣ ಅದನ್ನು ಓದಿದ ಕುಟುಂಬದವರು 911ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆದರೆ ಆ ವೇಳೆಗಾಗಲೇ ದಾಳಿ ಆರಂಭವಾಗಿತ್ತು ಎಂದು ಆಡಳಿತಾಧಿಕಾರಿ ವಾಟರ್ಸ್ ಗೆ ಹೇಳಿದ್ದಾರೆ.