ಅಮೆರಿಕ | ವಿಜಯೋತ್ಸವ ಮೆರವಣಿಗೆ ಸಂದರ್ಭ ಶೂಟೌಟ್ ; ಓರ್ವ ಸಾವು

ವಾಷಿಂಗ್ಟನ್: ಅಮೆರಿಕದ ಮಿಸ್ಸೋರಿ ರಾಜ್ಯದ ಕನ್ಸಾಸ್ ನಗರದಲ್ಲಿ ಬುಧವಾರ ಎನ್ಎಫ್ಎಲ್ ಚಾಂಪಿಯನ್ಷಿಪ್ ಗೆಲುವಿನ ಸಂಭ್ರಮಾಚರಣೆ ಸಂದರ್ಭ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಟ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಇತರ 21 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
`ಕನ್ಸಾಸ್ ಸಿಟಿ ಚೀಫ್ಸ್' ತಂಡ ಎನ್ಎಫ್ಎಲ್ ಟೂರ್ನಿಯ ಫೈನಲ್ನಲ್ಲಿ ಸ್ಯಾನ್ಫ್ರಾನ್ಸಿಸ್ಕೋ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಪ್ರಶಸ್ತಿ(ಫುಟ್ಬಾಲ್ ಟೂರ್ನಿ) ಪಡೆದ ಬಳಿಕ ಕನ್ಸಾಸ್ ಸಿಟಿ ಚೀಫ್ಸ್ ತಂಡದ ಸದಸ್ಯರೊಂದಿಗೆ ಅಭಿಮಾನಿಗಳು ವಿಜಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ಮುಕ್ತಾಯಗೊಂಡು ಹಾಡು-ನೃತ್ಯ ನಡೆಯುತ್ತಿದ್ದಾಗ ಗುಂಡಿನ ದಾಳಿ ನಡೆದಿದ್ದು ಸ್ಥಳೀಯ ರೇಡಿಯೋ ಸ್ಟೇಷನ್ನ ಆರ್ಜೆ ಲಿಸಾ ಲೋಪೆಝ್ ಮೃತಪಟ್ಟಿದ್ದಾನೆ. 6 ಮಕ್ಕಳ ಸಹಿತ ಇತರ 21 ಮಂದಿ ಗಾಯಗೊಂಡಿದ್ದಾರೆ. ಫುಟ್ಬಾಲ್ ತಂಡದ ಆಟಗಾರರು ಅಥವಾ ಕೋಚ್, ಆಡಳಿತ ವರ್ಗದವರು ಸುರಕ್ಷಿತವಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್ ಇಲಾಖೆಯ ಮುಖ್ಯಸ್ಥೆ ಸ್ಟೇಸಿ ಗ್ರೇವ್ಸ್ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.





