ಅಮೆರಿಕ: ಶ್ವೇತಭವನದ ಬಳಿಯಲ್ಲೇ ಇಬ್ಬರು ಸೈನಿಕರಿಗೆ ಗುಂಡೇಟು!

PC: x.com/gulf_news
ವಾಷಿಂಗ್ಟನ್: ಶ್ವೇತಭವನದ ಸನಿಹದಲ್ಲೇ ನಡೆದ ಗುಂಡಿನ ದಾಳಿಯಲ್ಲಿ ವೆಸ್ಟ್ ವರ್ಜೀನಿಯಾ ನ್ಯಾಷನಲ್ ಗಾರ್ಡ್ ನ ಇಬ್ಬರು ಸೈನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಶಂಕಿತ ದಾಳಿಕೋರನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಗಾಯಾಳು ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್ಬಿಐ) ಮುಖ್ಯಸ್ಥ ಕಾಶ್ ಪಟೇಲ್ ಹಾಗೂ ವಾಷಿಂಗ್ಟನ್ ಮೇಯರ್ ಮುರೆಲ್ ಬ್ರೌಸರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ದಾಳಿ ನಡೆದ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ಇದ್ದಿರಲಿಲ್ಲ. ಕೃತಜ್ಞತೆ ಸಮರ್ಪಣೆ ಸಮಾರಂಭಕ್ಕಾಗಿ ಫ್ಲೋರಿಡಾಗೆ ತೆರಳಿದ್ದರು ಎಂದು ತಿಳಿದ ಬಂದಿದೆ.
ಶ್ವೇತಭವನದಿಂದ ಎರಡು ಬ್ಲಾಕ್ ದೂರದಲ್ಲಿ ಮೆಟ್ರೋ ಸ್ಟೇಷನ್ ನಲ್ಲಿ ಬುಧವಾರ ಈ ದಾಳಿ ನಡೆದಿದ್ದು, ಜನರಲ್ಲಿ ಭೀತಿ ಮೂಡಿಸಿತು. ಏಕೈಕ ದಾಳಿಕೋರನನ್ನು ವಶಕ್ಕೆ ಪಡೆಯಲಾಗಿದ್ದು, ದಾಳಿಯ ಹಿಂದಿನ ಉದ್ದೇಶ ತಿಳಿದು ಬಂದಿಲ್ಲ. ಹೆಚ್ಚುವರಿ ಡಿಸಿ ಪೊಲೀಸ್ ಮುಖ್ಯಸ್ಥ ಜೆಫ್ರಿ ಕರ್ರೋಲ್ ಅವರ ಪ್ರಕಾರ, ದಾಳಿಕೋರ ಒಂದು ಮೂಲೆಯಿಂದ ಬಂದು ಸೇನೆಯತ್ತ ಗುಂಡಿನ ದಾಳಿ ಆರಂಭಿಸಿದ.
ಶ್ವೇತಭನದ ಸನಿಹದಲ್ಲಿ 17ನೇ ಮತ್ತು 1ನೇ ಬೀದಿಯ ಬದಿಯಲ್ಲಿ ನ್ಯಾಷನಲ್ ಗಾರ್ಡ್ ಪಡೆ ನಿಯೋಜಿಸಲಾಗಿತ್ತು. ಸ್ಥಳೀಯ ಕಾಲಮಾನದ ಪ್ರಕಾರ ಬುಧವಾರ ಮಧ್ಯಾಹ್ನ 2.15ಕ್ಕೆ ದಾಳಿ ನಡೆದಿದೆ. ಗುಂಡಿನ ಚಕಮಕಿಯ ಬಳಿಕ ಇತರ ಸೈನಿಕರು ದಾಳಿಕೋರನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.







