ಅಮೆರಿಕ | ನ್ಯೂಯಾರ್ಕ್ ನ ನೂತನ ಮೇಯರ್ ಆಗಿ ಇತಿಹಾಸ ಬರೆದ ಝೋಹ್ರಾನ್ ಮಮ್ದಾನಿ ಯಾರು?

PC: x.com/Phil_Lewis_
ನ್ಯೂಯಾರ್ಕ್: ಜಗತ್ತಿನ ಅತ್ಯಂತ ಪ್ರತಿಷ್ಠಿತ ನಗರಗಳಲ್ಲಿ ಒಂದಾದ ಅಮೇರಿಕಾದ ನ್ಯೂಯಾರ್ಕ್ ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಅಲ್ಲಿನ ಮೇಯರ್ ಹುದ್ದೆಗೆ ನಡೆದ ಚುನಾವಣೆಯಲ್ಲಿ ಅಚ್ಚರಿಯ, ಆದರೆ ನಿರೀಕ್ಷಿತ ಫಲಿತಾಂಶ ಬಂದಿದೆ.
ಡೆಮೊಕ್ರಾಟ್ ಪಕ್ಷದ ಅಭ್ಯರ್ಥಿ ಇಂಡಿಯನ್ ಅಮೇರಿಕನ್, ಇನ್ನೂ ಕೇವಲ 33 ವರ್ಷದ ಯುವ ನಾಯಕ, ಮುಸ್ಲಿಂ ಸಮುದಾಯದ ಝೋಹ್ರಾನ್ ಮಮ್ದಾನಿ ತಮ್ಮದೇ ಪಕ್ಷದ ಹಿರಿಯ, ಈಗ ಸ್ವತಂತ್ರ ಅಭ್ಯರ್ಥಿಯಾಗಿರುವ ಹಾಗು ಪ್ರಭಾವೀ ನಾಯಕ ಆಂಡ್ರೂ ಕುಮೋ ಅವರನ್ನು ಸೋಲಿಸಿ ನ್ಯೂಯಾರ್ಕ್ ನ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
"ನೆಲ್ಸನ್ ಮಂಡೇಲಾ ಅವರು ಹೇಳಿದಂತೆ ಮಾಡಿ ತೋರಿಸುವವರೆಗೂ ಅದು ಅಸಾಧ್ಯವೆಂಬಂತೆಯೇ ಕಾಣುತ್ತದೆ. ಆದರೆ ಸ್ನೇಹಿತರೇ, ನಾವು ಮಾಡಿ ತೋರಿಸಿದ್ದೇವೆ. ಅದನ್ನು ಮಾಡಿರುವುದು ನೀವು. ನ್ಯೂಯಾರ್ಕ್ ನಗರಕ್ಕೆ ಡೆಮೊಕ್ರಾಟ್ ಮೇಯರ್ ಅಭ್ಯರ್ಥಿಯಾಗುವುದು ನನ್ನ ಪಾಲಿಗೆ ದೊಡ್ಡ ಗೌರವ " ಎಂದು ಅಭ್ಯರ್ಥಿಯಾಗಿ ಅಧಿಕೃತವಾಗಿ ಆಯ್ಕೆಯಾದಾಗ ಝೋಹ್ರಾನ್ ಮಮ್ದಾನಿ ಹೇಳಿದ್ದರು. ಈಗ ಅವರು ನ್ಯೂಯಾರ್ಕ್ ಮೇಯರ್ ಆಗಿ ಅಸಾಧ್ಯವನ್ನು ಸಾಧ್ಯವಾಗಿಸಿದ್ದಾರೆ.
ಈ ಸ್ವಯಂ ಘೋಷಿತ ಡೆಮೋಕ್ರಾಟಿಕ್ ಸಮಾಜವಾದಿ ಅಲ್ಲಿ ಆಯ್ಕೆಯಾಗುವುದು ಅಸಾಧ್ಯ ಎಂಬಷ್ಟೇ ಕಷ್ಟವಿತ್ತು. ಆದರೆ ಅವರು ಆಯ್ಕೆಯಾಗಿದ್ದಾರೆ. 80 ಲಕ್ಷ ಜನಸಂಖ್ಯೆಯ ನ್ಯೂಯಾರ್ಕ್ ನಗರ ನ್ಯೂಯಾರ್ಕ್ ಡೆಮೊಕ್ರಾಟರ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟ ನಗರ.
ತನ್ನ ಹಿನ್ನೆಲೆ ಹಾಗು ಸಿದ್ಧಾಂತದ ಬಗ್ಗೆ ಮುಕ್ತವಾಗಿ ಮಾತಾಡುವ ಝೋಹ್ರಾನ್ ತಾನು ಅಧ್ಯಕ್ಷ ಟ್ರಂಪ್ ಪಾಲಿನ ಅತ್ಯಂತ ಕೆಟ್ಟ ದುಃಸ್ವಪ್ನ ಎಂದೇ ಬಣ್ಣಿಸಿಕೊಂಡಿದ್ದಾರೆ.
ಝೋಹ್ರಾನ್ ಡೆಮೊಕ್ರಾಟ್ ಅಭ್ಯರ್ಥಿಯಾಗಿ ಆಯ್ಕೆಯಾದ ಬೆನ್ನಿಗೇ ಅವರು ಈ ಹಿಂದೆ ಪ್ರಧಾನಿ ಮೋದಿ ಬಗ್ಗೆ ಮಾಡಿರುವ ಕಟು ಟೀಕೆಯ ವೀಡಿಯೊವೊಂದು ವೈರಲ್ ಆಗಿತ್ತು. ಮೋದಿ ಜೊತೆ ಸಭೆಯಲ್ಲಿ ಭಾಗವಹಿಸುವ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಝೋಹ್ರಾನ್ " ನನ್ನ ತಂದೆಯ ಕುಟುಂಬ ಗುಜರಾತ್ ಮೂಲದವರು. ನನ್ನ ತಂದೆ ಮುಸ್ಲಿಂ, ನಾನೂ ಮುಸ್ಲಿಂ. ಅಲ್ಲಿ ನರೇಂದ್ರ ಮೋದಿ ಮುಸ್ಲಿಮರ ಹತ್ಯಾಕಾಂಡ ನಡೆಸಲು ಸಹಕರಿಸಿದ್ದರು. ಅದೆಷ್ಟು ಭೀಕರವಾಗಿತ್ತು ಎಂದರೆ ಗುಜರಾತ್ ನಲ್ಲಿ ಮುಸ್ಲಿಮರೇ ಉಳಿದಿಲ್ಲ ಎಂದು ಜಗತ್ತು ಭಾವಿಸುವಂತಾಗಿತ್ತು. ಹಾಗಾಗಿ ಮೋದಿಯನ್ನು ಇಸ್ರೇಲ್ ನ ಬೆಂಜಮಿನ್ ನೆತನ್ಯಾಹುರಂತೆಯೇ ನೋಡಬೇಕು, ಅವರೊಬ್ಬ ಯುದ್ಧ ಕ್ರಿಮಿನಲ್ ", ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದರು.
ಕಾಲೇಜು ವಿದ್ಯಾರ್ಥಿಯಾಗಿರುವಾಗಲೇ ಫೆಲೆಸ್ತೀನ್ ಪರ ಸಂಘಟನೆ ಕಟ್ಟಿದ್ದ ಝೋಹ್ರಾನ್, ಇಸ್ರೇಲ್ ನ ಆಕ್ರಮಣ ನೀತಿಯ ಕಟು ಟೀಕಾಕಾರರು ಹಾಗು ಫೆಲೆಸ್ತೀನ್ ನ ಕಟ್ಟಾ ಬೆಂಬಲಿಗರು ಎಂದೂ ಗುರುತಿಸಲ್ಪಟ್ಟಿದ್ದಾರೆ.
ಝೋಹ್ರಾನ್ ಭಾರತದಿಂದ ಉಗಾಂಡಕ್ಕೆ ವಲಸೆ ಹೋದ ಕುಟುಂಬದಿಂದ ಬಂದ ಶಿಕ್ಷಣ ತಜ್ಞ ಮಹಮೂದ್ ಮಮ್ದಾನಿ ಹಾಗು ಖ್ಯಾತ ಭಾರತೀಯ ಚಿತ್ರ ನಿರ್ದೇಶಕಿ ಮೀರಾ ನಾಯರ್ ಅವರ ಪುತ್ರ. ಹುಟ್ಟಿದ್ದು ಉಗಾಂಡದ ಕಂಪಾಲದಲ್ಲಿ. ಏಳು ವರ್ಷದವನಿರುವಾಗ ನ್ಯೂಯಾರ್ಕ್ ಗೆ ಬಂದರು. 2018 ರಲ್ಲಿ ಅಮೇರಿಕನ್ ಪ್ರಜೆಯಾದರು. ಮೈನೆ ರಾಜ್ಯದ ಬೌಡೊಯ್ನ್ ಕಾಲೇಜಿನಲ್ಲಿ ಆಫ್ರಿಕನ್ ಸ್ಟಡೀಸ್ ನಲ್ಲಿ ಪದವಿ ಪಡೆದಿದ್ದಾರೆ. ಈ ವರ್ಷದ ಪ್ರಾರಂಭದಲ್ಲಿ ಸಿರಿಯನ್ ಕಲಾವಿದೆ ರಮಾ ದುವಾಜಿಯನ್ನು ವಿವಾಹವಾದರು. ರಾಜಕೀಯಕ್ಕೆ ಬರುವ ಮೊದಲು ಸರಕಾರ ಒಕ್ಕಲೆಬ್ಬಿಸುವ ವಿರುದ್ಧ ಹೋರಾಡಲು ಬಡವರಿಗೆ ನೆರವಾಗುತ್ತಿದ್ದರು. ರ್ಯಾಪ್ ಸಂಗೀತ ಹಾಗು ಬರಹ ರಂಗದಲ್ಲೂ ಕೈಯಾಡಿಸಿದ್ದರು.
2020 ರಲ್ಲಿ ನ್ಯೂಯಾರ್ಕ್ ಅಸೆಂಬ್ಲಿಗೆ ಸ್ಪರ್ಧಿಸಿ ಅದರ ಸದಸ್ಯರಾದರು. ಆ ಸ್ಥಾನ ಪಡೆದ ಪ್ರಪ್ರಥಮ ದಕ್ಷಿಣ ಏಷ್ಯಾದ ವ್ಯಕ್ತಿ, ಪ್ರಪ್ರಥಮ ಉಗಾಂಡಾ ಮೂಲದ ವ್ಯಕ್ತಿ ಹಾಗು ಮೂರನೇ ಮುಸ್ಲಿಂ ವ್ಯಕ್ತಿ ಅವರಾದರು.
ತಾನು ಧ್ವನಿ ಇಲ್ಲದ ವರ್ಗಗಳ ಧ್ವನಿ ಎಂದೇ ಗುರುತಿಸಿಕೊಳ್ಳುವ ಝೋಹ್ರಾನ್, ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ಒಂದಾದ ನ್ಯೂಯಾರ್ಕ್ ನಲ್ಲಿ ದುಡಿಯುವ ವರ್ಗದ ಜನರ ಪಾಲಿಗೆ ಜೀವನ ಸುಲಭವಾಗಿಸುವುದೇ ತನ್ನ ಗುರಿ ಎಂದು ಘೋಷಿಸಿ ಚುನಾವಣಾ ಕಣಕ್ಕಿಳಿದಿದ್ದರು.
ನಗರದ ಅತಿ ಶ್ರೀಮಂತರಿಗೆ ಹೆಚ್ಚುವರಿ ತೆರಿಗೆ ವಿಧಿಸಿ ದುಡಿಯುವವರಿಗೆ ಅಗತ್ಯ ವಸ್ತುಗಳು ಕೈಗೆಟಕುವ ಬೆಲೆಯಲ್ಲಿ ಸಿಗುವಂತೆ ಮಾಡುವುದು ಅವರ ಯೋಜನೆ. ಬರ್ನಿ ಸ್ಯಾಂಡರ್ಸ್ ಹಾಗು ಅಲೆಕ್ಸಾಂಡ್ರಾ ಒಕಾಸಿಯೋ ರಂತಹ ಇತರ ಸಮಾಜವಾದಿ ಡೆಮೊಕ್ರಾಟ್ ನಾಯಕರು ಝೋಹ್ರಾನ್ ರನ್ನು ಬಲವಾಗಿ ಬೆಂಬಲಿಸಿದ್ದರು. ಡೆಮೊಕ್ರಾಟ್ ಪಕ್ಷದ ಹಿರಿಯ ನಾಯಕರು ಬಹಳ ತಡವಾಗಿ ಝೋಹ್ರಾನ್ ಗೆ ಬೆಂಬಲ ಘೋಷಿಸಿದ್ದರು.
ತಳಮಟ್ಟದಲ್ಲಿ ಸಾವಿರಾರು ಕಾರ್ಯಕರ್ತರ ಜಾಲವನ್ನೇ ಕಟ್ಟಿ ನಿಲ್ಲಿಸಿರುವ ಝೋಹ್ರಾನ್ ತನ್ನ ವಿಭಿನ್ನ ಪ್ರಚಾರ ತಂತ್ರದ ಮೂಲಕ ಜನರ ಗಮನ ಸೆಳೆದರು. ಚುನಾವಣಾ ಪ್ರಕ್ರಿಯೆ ಬಗ್ಗೆ ಉಪಯುಕ್ತ ಮಾಹಿತಿಗಳಿರುವ ಆಕರ್ಷಕ ಶಾರ್ಟ್ ವಿಡಿಯೋಗಳು, ಬಾಲಿವುಡ್ ಸಿನಿಮಾಗಳ ಉಲ್ಲೇಖಗಳು, ಝೋಹ್ರಾನ್ ರಿಂದ ಆಗಾಗ ಹಿಂದಿ ಉರ್ದು ಮಾತುಗಳು ಜನರನ್ನು ಆಕರ್ಷಿಸಿದ್ದವು. ಒಟ್ಟಾರೆ ಜನರನ್ನು ನೇರವಾಗಿ ತಲುಪಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆಯಾಗಿ ಝೋಹ್ರಾನ್ ಕಂಡಿದ್ದಾರೆ.
ನಿರೀಕ್ಷೆಯಂತೆ ಟ್ರಂಪ್ ಆಡಳಿತ ವೈಖರಿಯ ಕಟು ಟೀಕಾಕಾರರಾಗಿ ಝೋಹ್ರಾನ್ ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಟ್ರಂಪ್ ಸರಕಾರದ ವಲಸೆ ನೀತಿ, ಅಕ್ರಮ ವಲಸಿಗರ ಬಂಧನಗಳನ್ನು ಅವರು ಸ್ಪಷ್ಟವಾಗಿ ವಿರೋಧಿಸಿದ್ದಾರೆ.
ಕುಮೋ ವಿರುದ್ಧದ ಝೋಹ್ರಾನ್ ಗೆಲುವು ಹಲವು ಕಾರಣಗಳಿಗಾಗಿ ಅಸಾಮಾನ್ಯವಾದುದು. ಈ ಮೊದಲು ನ್ಯೂಯಾರ್ಕ್ ರಾಜ್ಯದ ಗವರ್ನರ್ ಆಗಿದ್ದ ಕುಮೋ ವಿರುದ್ಧ ಔಹಲವು ಮಹಿಳೆಯರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಬಳಿಕ ರಾಜೀನಾಮೆ ನೀಡಬೇಕಾಯಿತು. ಕುಮೋ ತಂದೆ ಕೂಡ ನ್ಯೂಯಾರ್ಕ್ ಗವರ್ನರ್ ಆಗಿದ್ದವರು. ಕುಮೋ ಮೇಯರ್ ಚುನಾವಣೆಗೆ ಸ್ಪರ್ಧಿಸಲು ಮುಂದಾಗಲು ಪ್ರಮುಖ ಕಾರಣ ಹಾಲಿ ಮೇಯರ್ ಡೆಮೊಕ್ರಾಟ್ ಪಕ್ಷದ ಎರಿಕ್ ಆಡಮ್ಸ್ ವಿರುದ್ಧ ಬಂದ ಭ್ರಷ್ಟಾಚಾರ ಆರೋಪಗಳು. ಎರಿಕ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಳಿಕ ಕಣದಿಂದ ಹಿಂದೆ ಸರಿದು ಕುಮೋಗೆ ಬೆಂಬಲ ಘೋಷಿಸಿದ್ದರು. ಕುಮೋಗೆ ಮಾಜಿ ಅಧ್ಯಕ್ಷ ಬಿಲ್ ಗೇಟ್ಸ್ , ಮಾಜಿ ಮೇಯರ್ ಬ್ಲೂಮ್ ಬರ್ಗ್ ಅವರ ಬೆಂಬಲವೂ ಇತ್ತು.
ಝೋಹ್ರಾನ್ ಯಹೂದಿ ವಿರೋಧಿ ಎಂದು ಕುಮೋ ಪ್ರಚಾರ ಮಾಡಿದ್ದರು. ಇಸ್ರೇಲ್ ಬಿಟ್ಟರೆ ಅತಿ ಹೆಚ್ಚು ಯಹೂದಿಗಳು ಇರುವ ನಗರ ನ್ಯೂಯಾರ್ಕ್. ಕುಮೋ ಮಾಡಿದ ಆರೋಪಕ್ಕೆ ತಿರುಗೇಟು ಕೊಟ್ಟಿದ್ದ ಝೋಹ್ರಾನ್ "ನ್ಯೂಯಾರ್ಕ್ ನ ಯಹೂದಿಗಳಿಗೆ ಎಲ್ಲಿ ಅಗತ್ಯ ಬಿದ್ದರೂ ನಾನು ಅವರ ಜೊತೆಗಿರುತ್ತೇನೆ " ಎಂದು ಹೇಳಿದ್ದರು. ಹಾಗು ಕುಮೋ ತನ್ನ ಪ್ರಚಾರಕ್ಕೆ ದೊಡ್ಡ ಕಾರ್ಪೊರೇಟ್ ಕಂಪೆನಿಗಳ ಹಣ ಪಡೆಯುತ್ತಿರುವುದನ್ನು ಪ್ರಶ್ನಿಸಿದ್ದರು. ನ್ಯೂ ಯಾರ್ಕ್ ಟೈಮ್ಸ್ ಪ್ರಕಾರ ಕುಮೋ ಬೆಂಬಲಿಗರು ಝೋಹ್ರಾನ್ ವಿರುದ್ಧ ಪ್ರಚಾರಕ್ಕೆ 25 ಮಿಲಿಯನ್ ಡಾಲರ್ ಹಣ ಸಂಗ್ರಹಿಸಿದ್ದರು.
ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಝೋಹ್ರಾನ್ ರನ್ನು ಬಹಳ ಕಟುವಾಗಿ ಟೀಕಿಸಿ ವಿರೋಧಿಸಿದ್ದರು. ಉದ್ಯಮಿ ಎಲಾನ್ ಮಸ್ಕ್ ಕೂಡ ಕುಮೋ ಬೆಂಬಲಕ್ಕೆ ನಿಂತು ಝೋಹ್ರಾನ್ ರನ್ನು ವಿರೋಧಿಸಿದ್ದರು. ಆದರೆ ಎಲ್ಲ ಬಲಾಢ್ಯರ, ಪ್ರಭಾವಿಗಳ, ಹಣವಂತರ ವಿರೋಧವನ್ನು ಮೆಟ್ಟಿ ನಿಂತು ಝೋಹ್ರಾನ್ ಭಾರೀ ಜನಬೆಂಬಲ ಗಳಿಸಿ ಗೆದ್ದಿದ್ದಾರೆ
ಝೋಹ್ರಾನ್ ಈಗ ಸ್ವತಂತ್ರ ಅಭ್ಯರ್ಥಿ ಆಂಡ್ರೂ ಕುಮೋ ಹಾಗು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲೀವ ಅವರನ್ನು ಮೇಯರ್ ಚುನಾವಣೆಯಲ್ಲಿ ಸೋಲಿಸಿದ್ದಾರೆ
ಈಗ , ಝೋಹ್ರಾನ್ ನ್ಯೂಯಾರ್ಕ್ ನ ಪ್ರಪ್ರಥಮ ಇಂಡಿಯನ್ ಅಮೇರಿಕನ್ ಹಾಗು ಪ್ರಪ್ರಥಮ ಮುಸ್ಲಿಂ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಅವರ ಗೆಲುವಿನ ಮೂಲಕ ಅಮೇರಿಕದ ರಾಷ್ಟ್ರೀಯ ರಾಜಕಾರಣದಲ್ಲಿ ಸಮಾಜವಾದಿ ಹಾಗು ಜನಪರ ಚಿಂತನೆ ಜನ ಬೆಂಬಲ ಪಡೆದಿದೆ.
ನ್ಯೂಯಾರ್ಕ್ ನಲ್ಲಿ ಡೆಮೊಕ್ರಾಟ್ ಮತದಾರರು ಹೆಚ್ಚಿದ್ದರೂ ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಗೆ ಇಲ್ಲಿ ಸಿಕ್ಕಿದ ಮುನ್ನಡೆ ಈ ಹಿಂದೆ ಬೈಡನ್ ಗೆ ಸಿಕ್ಕಿದ್ದಕ್ಕಿಂತ ಕಡಿಮೆ ಇತ್ತು. ಅದಕ್ಕೆ ಡೆಮೊಕ್ರಾಟರ ಹೆಚ್ಚು ಪ್ರಗತಿಪರ ನಿಲುವುಗಳೇ ಕಾರಣ ಎಂಬ ವಿಶ್ಲೇಷಣೆಯೂ ಕೇಳಿ ಬಂದಿತ್ತು.
ಆದರೆ ಈಗ ಪಕ್ಕಾ ಪ್ರಗತಿಪರ, ಜಾತ್ಯತೀತ ಹಾಗು ಸಮಾಜವಾದಿ ಚಿಂತನೆಯ ಮುಸ್ಲಿಂ ಅಭ್ಯರ್ಥಿ ಝೋಹ್ರಾನ್ ಆ ಅಭಿಪ್ರಾಯವನ್ನು ಸುಳ್ಳಾಗಿಸಿ, ನ್ಯೂಯಾರ್ಕ್ ನಲ್ಲಿ ಗೆಲುವು ದಾಖಲಿಸಿ ಇತಿಹಾಸ ಬರೆದಿದ್ದಾರೆ







