‘‘ಬ್ರಾಹ್ಮಣರು ಲಾಭ ಮಾಡಿಕೊಳ್ಳುತ್ತಿದ್ದಾರೆೆ’’ ಹೇಳಿಕೆ; ಪೀಟರ್ ನವರೊ ವಿರುದ್ಧ ಕ್ರಮಕ್ಕೆ ಅಮೆರಿಕದ ಹಿಂದೂ ಸಂಘಟನೆ ಆಗ್ರಹ

ಪೀಟರ್ ನವರೊ | PC : NDTV
ವಾಷಿಂಗ್ಟನ್, ಸೆ. 3: ಬ್ರಾಹ್ಮಣರು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಹೇಳಿಕೆ ನೀಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರದ ವಾಣಿಜ್ಯ ಸಲಹೆಗಾರ ಪೀಟರ್ ನವರೊ ಅವರನ್ನು ವಜಾಗೊಳಿಸುವಂತೆ ಹಿಂದೂಪ್ಯಾಕ್ಟ್ಸ್ ನ ಅಮೆರಿಕನ್ ಹಿಂದೂಸ್ ಎಗೈನ್ಸ್ಟ್ ಡಿಫಮೇಷನ್ (ಎಎಚ್ಎಡಿ) ಮಂಗಳವಾರ ಆಗ್ರಹಿಸಿದೆ.
ಪೀಟರ್ ನವರೊ ಅವರ ಹೇಳಿಕೆ ‘‘ಅನುಚಿತ ಹಾಗೂ ಹಿಂದೂಫೋಬಿಕ್’’ ಎಂದು ಅದು ವಿವರಿಸಿದೆ.
ತನ್ನ ಪತ್ರಿಕಾ ಹೇಳಿಕೆಯಲ್ಲಿ ಎಚ್ಎಡಿ, ‘‘ನವರೊ ಅವರ ಹೇಳಿಕೆ ಸಾಂಸ್ಕೃತಿಕ ಆಕ್ರಮಣಕಾರಿ ಮಾತ್ರವಲ್ಲದೆ ಶತಕೋಟಿಗೂ ಅಧಿಕ ಹಿಂದೂಗಳ ಘನತೆಯನ್ನು ಅಪಾಯಕ್ಕೆ ಒಡ್ಡ ಬಲ್ಲ ಪ್ರಚೋದನೆಯೂ ಆಗಿದೆ. ಅಲ್ಲದೆ ಎರಡು ದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಮೂಲಭೂತ ಸಂಬಂಧಕ್ಕೆ ಬೆದರಿಕೆಯೂ ಆಗಿದೆ’’ ಎಂದಿದೆ.
‘‘ಭಾರತದ ಜನರ ವೆಚ್ಚದಿಂದ ಬ್ರಾಹ್ಮಣರು ಲಾಭ ಮಾಡಿಕೊಳ್ಳುತ್ತಿದ್ದಾರೆ’’ ಎಂಬ ನವರೊ ಹೇಳಿಕೆಯನ್ನು ಟೀಕಿಸಿರುವ ಸಂಘಟನೆ, ಈ ಹೇಳಿಕೆಯನ್ನು ವಸಾಹತುಶಾಹಿ ಯುಗದ ಸ್ಟೀರಿಯೊಟೈಪ್ ಎಂದು ಕರೆದಿದೆ. ‘‘ಇದು ವಿಮರ್ಶೆ ಅಲ್ಲ; ಇದು ಹಿಂದೂ ಸಮಾಜವನ್ನು ವಿಭಜಿಸಲು ಮರು ರೂಪಿಸಲಾದ ವಸಾಹತುಶಾಹಿ ಯುಗದ ಚಿಂತನೆ’’ ಎಂದು ಸಂಘಟನೆ ಹೇಳಿದೆ.
ಹಿಂದೂಪ್ಯಾಕ್ಟ್ನ ಕಾರ್ಯಾಧ್ಯಕ್ಷ ಅಜಯ್ ಶಾ, ಇದು ವಿದೇಶಿ ನೀತಿ ಅಲ್ಲ. ಇದು ‘‘ಶಸ್ತ್ರಸಜ್ಜಿತ ಹಿಂದೂಫೋಬಿಯಾ’’ ಎಂದಿದ್ದಾರೆ. ವಸಾಹತುಶಾಹಿ ಚಿಂತನೆಗಳ ಮೂಲಕ ಹಿಂದೂಗಳನ್ನು ವಿಭಜಿಸುವುದರಿಂದ ಸಂಬಂಧ ಬೆಳೆಯುವುದಿಲ್ಲ; ಸಂಬಂಧವನ್ನು ಛಿದ್ರಗೊಳಿಸುತ್ತದೆ.‘‘ಅಮೆರಿಕದ ರಾಜಕಾರಣದಲ್ಲಿ ನವರೊರಂತ ಜನರಿಗೆ ಸ್ಥಾನ ಇಲ್ಲ’’ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೇಸರಿ ನಿಲುವಂಗಿಯಲ್ಲಿ ಇರುವ ಚಿತ್ರವನ್ನು ಶೇರ್ ಮಾಡಿರುವುದಕ್ಕೆ ಸಂಘಟನೆ ನವರೊ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಭಾರತದ ಮೇಲೆ ಆರ್ಥಿಕ ಒತ್ತಡ ಹೇರುವಾಗ ಹಿಂದೂಗಳನ್ನು ಅಣಕಿಸಲು ಈ ಚಿತ್ರವನ್ನು ಶೇರ್ ಮಾಡಲಾಗಿದೆ ಎಂದು ಸಂಘಟನೆ ಹೇಳಿದೆ.
ನವರೊ ಅವರು ಹೇಳಿಕೆಯ ಗುರಿ ಹಿಂದೂಗಳ ನಂಬಿಕೆ ಆಗಿದ್ದರೆ, ಅದು ಧಾರ್ಮಿಕ ದ್ವೇಷ. ಅವರ ಹೇಳಿಕೆಯ ಗುರಿ ಭಾರತದ ನಾಯಕತ್ವವಾಗಿದ್ದರೆ, ಅದು ರಾಜತಾಂತ್ರಿಕ ನಿರ್ಲಕ್ಷ್ಯ. ಅದು ಯಾವುದೇ ಅದರು ಕೂಡ ಅತಿಕ್ರಮಣವಾಗಿದೆ ಎಂದು ಹಿಂದೂಪ್ಯಾಕ್ಟ್ನ ಅಧ್ಯಕ್ಷರಾದ ದೀಪ್ತಿ ಮಹಾಜನ್ ಹೇಳಿದ್ದಾರೆ.
*ಪೀಟರ್ ನವರೊ ಹೇಳಿದ್ದೇನು?
ಭಾರತದ ಜನರ ವೆಚ್ಚದಿಂದ ಬ್ರಾಹ್ಮಣರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ನಿಲ್ಲಿಸುವ ಅಗತ್ಯ ಇದೆ ಎಂದು ಪೀಟರ್ ನವರೊ ಹೇಳಿದ್ದರು.
ಭಾರತ ರಶ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದರು.
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ನಾಯಕ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಗೆ ಯಾಕೆ ಸಹಕರಿಸುತ್ತಾರೆ ಎಂದು ತನಗೆ ಅರ್ಥವಾಗುತ್ತಿಲ್ಲ ಎಂದು ನವರೊ ಹೇಳಿದ್ದರು.







