ವೆನೆಝುವೆಲಾದ ಮೇಲೆ ಅಮೆರಿಕದ ಒತ್ತಡ ತಂತ್ರ: ವಿಶ್ವಸಂಸ್ಥೆ ತಜ್ಞರ ಕಳವಳ

Photo Credit : NDTV
ಜಿನೆವಾ, ಡಿ.5: ವೆನೆಝುವೆಲಾದ ಮೇಲೆ ಅಮೆರಿಕದಿಂದ ಹೆಚ್ಚುತ್ತಿರುವ ಒತ್ತಡದ ಬಗ್ಗೆ ವಿಶ್ವಸಂಸ್ಥೆಯ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದು ವೆನೆಝುವೆಲಾದ ವಾಯುಪ್ರದೇಶವನ್ನು ಮುಚ್ಚಲಾಗಿದೆ ಎಂದು ಪರಿಗಣಿಸಬೇಕೆಂಬ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಇತ್ತೀಚಿನ ಘೋಷಣೆ ಅಪಾಯಕಾರಿ ಬೆಳವಣಿಗೆಯ ಸೂಚನೆಯಾಗಿರಬಹುದು ಎಂದಿದ್ದಾರೆ.
`ಅಂತರಾಷ್ಟ್ರೀಯ ಕಾನೂನು ಸ್ಪಷ್ಟವಾಗಿದೆ. ರಾಷ್ಟ್ರಗಳು ತಮ್ಮ ಪ್ರದೇಶದ ಮೇಲಿನ ವಾಯುಪ್ರದೇಶದ ಮೇಲೆ ಸಂಪೂರ್ಣ ಮತ್ತು ವಿಶೇಷ ಸಾರ್ವಭೌಮತ್ವವನ್ನು ಹೊಂದಿದೆ. ಮತ್ತೊಂದು ದೇಶದ ವಾಯುಪ್ರದೇಶವನ್ನು ನಿಯಂತ್ರಿಸಲು, ನಿರ್ಬಂಧಿಸಲು ಅಥವಾ ಮುಚ್ಚಲು ಪ್ರಯತ್ನಿಸುವ ಎಲ್ಲಾ ಕ್ರಮಗಳೂ ಚಿಕಾಗೋ ನಿರ್ಣಯದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅಂತರಾಷ್ಟ್ರೀಯ ನಾಗರಿಕ ವಾಯುಯಾನ ಸಮ್ಮೇಳನದ ಆರ್ಟಿಕಲ್ 1 ಅನ್ನು ಉಲ್ಲೇಖಿಸಿ ವಿಶ್ವಸಂಸ್ಥೆಯ ತಜ್ಞರು ಹೇಳಿದ್ದಾರೆ.
`ಯಾವುದೇ ರಾಷ್ಟ್ರದ ರಾಜಕೀಯ ಸ್ವಾತಂತ್ರ್ಯ ಅಥವಾ ಪ್ರಾದೇಶಿಕ ಸಮಗ್ರತೆಯ ವಿರುದ್ಧ ಬೆದರಿಕೆ ಅಥವಾ ಬಲಪ್ರಯೋಗವನ್ನು ವಿಶ್ವಸಂಸ್ಥೆಯ ಚಾರ್ಟರ್ (ಸನದು) ನಿಷೇಧಿಸಿದೆ. ಮತ್ತೊಂದು ದೇಶದ ವಾಯುಪ್ರದೇಶದ ಮೇಲೆ ಪರಿಣಾಮ ಬೀರುವ ಕ್ರಮಗಳು ಸಾರ್ವಭೌಮತೆಯ ಉಲ್ಲಂಘನೆಯಾಗಬಹುದು ಮತ್ತು ಬಲ ಪ್ರಯೋಗದ ಕಾನೂನು ಬಾಹಿರ ಬೆದರಿಕೆಯನ್ನು ರೂಪಿಸಬಹುದು. ಬಲ ಪ್ರಯೋಗಿಸದಿರುವುದು, ಹಸ್ತಕ್ಷೇಪ ಮಾಡದಿರುವುದು ಮತ್ತು ಪ್ರಾದೇಶಿಕ ಉಲ್ಲಂಘನೆ ನಿಷೇಧಿಸುವ ತತ್ವಗಳು ಅಂತರಾಷ್ಟ್ರೀಯ ಕಾನೂನು ವ್ಯವಸ್ಥೆಯ ಮೂಲಾಧಾರವಾಗಿದೆ ಎಂದು ಅಂತರಾಷ್ಟ್ರೀಯ ನ್ಯಾಯಾಲಯ ದೃಢಪಡಿಸಿದೆ.
`ರಾಷ್ಟ್ರವೊಂದರ ಪ್ರಾದೇಶಿಕ ವ್ಯಾಪ್ತಿಯಲ್ಲಿ(ವಾಯು ಪ್ರದೇಶ ಸೇರಿದಂತೆ) ಹಸ್ತಕ್ಷೇಪದ ಏಕಪಕ್ಷೀಯ ಕ್ರಮವು ಪ್ರಾದೇಶಿಕ ಸ್ಥಿರತೆಯನ್ನು ಸಂಪೂರ್ಣವಾಗಿ ಹಾಳುಮಾಡುವ ಅಪಾಯವಿದೆ ಮತ್ತು ವೆನೆಝುವೆಲಾದ ಆರ್ಥಿಕತೆಯನ್ನು ಗಂಭೀರವಾಗಿ ದುರ್ಬಲಗೊಳಿಸುತ್ತದೆ ' ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದು ಮತ್ತೊಂದು ರಾಷ್ಟ್ರದ ವಾಯುಪ್ರದೇಶವನ್ನು ಮುಚ್ಚಲು ಅಮೆರಿಕ ಯಾವುದೇ ಕಾನೂನು ಅಧಿಕಾರವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವೆನೆಝುವೆಲಾದ ವಾಯುಪ್ರದೇಶದಲ್ಲಿ `ಸಂಭಾವ್ಯ ಅಪಾಯಕಾರಿ ಸ್ಥಿತಿ'ಯ ಬಗ್ಗೆ , ವೆನೆಝುವೆಲಾದಲ್ಲಿ ಭದ್ರತೆ ಹದಗೆಡುತ್ತಿರುವ ಬಗ್ಗೆ ಅಮೆರಿಕದ ಫೆಡರಲ್ ವಾಯುಯಾನ ಪ್ರಾಧಿಕಾರ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಈಗಾಗಲೇ 6 ಅಂತರಾಷ್ಟ್ರೀಯ ವಿಮಾನ ಯಾನ ಸಂಸ್ಥೆಗಳು ವೆನೆಝುವೆಲಾ ರಾಜಧಾನಿ ಕ್ಯಾರಕಸ್ಗೆ ವಿಮಾನಗಳನ್ನು ಅಮಾನತುಗೊಳಿಸಿವೆ. ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಕ್ರಮಗಳಿಂದ ದೂರವಿರುವಂತೆ ಮತ್ತು ಕೈಗೊಳ್ಳುವ ಯಾವುದೇ ಕ್ರಮಗಳು ವಿಶ್ವಸಂಸ್ಥೆಯ ಚಾರ್ಟರ್, ಚಿಕಾಗೋ ನಿರ್ಣಯ ಮತ್ತು ಸಾಂಪ್ರದಾಯಿಕ ಅಂತರಾಷ್ಟ್ರೀಯ ಕಾನೂನಿನ ಸಂಬಂಧಿತ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ವಿಶ್ವಸಂಸ್ಥೆ ತಜ್ಞರು ಅಮೆರಿಕವನ್ನು ಆಗ್ರಹಿಸಿದ್ದಾರೆ.







