ಇರಾನ್ ನಿಂದ ಬೆದರಿಕೆ ಹಿನ್ನಲೆ| ಸೇನಾ ನೆಲೆಗೆ ಸ್ಥಳಾಂತರಗೊಂಡ ಅಮೆರಿಕದ ಖಜಾನೆ ಕಾರ್ಯದರ್ಶಿ

ಸ್ಕಾಟ್ ಬೆಸೆಂಟ್ | Photo Credit : AP
ವಾಶಿಂಗ್ಟನ್: ಇರಾನ್ಗೆ ಸಂಬಂಧಿಸಿದ ಬೆದರಿಕೆಗಳ ನಡುವೆ, ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು `ತಮ್ಮ ಸುರಕ್ಷತೆಗಾಗಿ' ವಾಷಿಂಗ್ಟನ್ ಪ್ರದೇಶದ ತಮ್ಮ ಮನೆಯಿಂದ ಸೇನಾ ನೆಲೆಗೆ ಸ್ಥಳಾಂತರಗೊಂಡಿದ್ದಾರೆ ಎಂದು ಪರಿಸ್ಥಿತಿಯ ಬಗ್ಗೆ ತಿಳಿದಿರುವ ಅಧಿಕೃತ ಮೂಲವೊಂದು ಬುಧವಾರ ದೃಢಪಡಿಸಿದೆ.
ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರ ನಂತರ, ಸೇನಾ ವಸತಿಗೃಹಕ್ಕೆ ಸ್ಥಳಾಂತರಗೊಂಡ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಪುಟದ ಮೂರನೇ ಹಿರಿಯ ಅಧಿಕಾರಿ ಬೆಸೆಂಟ್ ಆಗಿದ್ದಾರೆ. ಬೆಸೆಂಟ್ ಅವರ ವಾಷಿಂಗ್ಟನ್ ನಿವಾಸದ ಫೋಟೋ ಪ್ರಕಟವಾದ ನಂತರ ಆ ಆಸ್ತಿಯ ನಿಖರ ಸ್ಥಳವನ್ನು (ಜಿಯೋ-ಲೊಕೇಟ್) ಪತ್ತೆಹಚ್ಚಬಹುದು ಎಂದು ಅಧಿಕಾರಿಗಳು ನಿರ್ಧರಿಸಿದ ಬೆನ್ನಲ್ಲೇ ಈ ಸ್ಥಳಾಂತರ ನಡೆದಿದೆ.
ಮಧ್ಯಪ್ರಾಚ್ಯ ಯುದ್ಧ ಪ್ರಾರಂಭವಾದಾಗಿನಿಂದ ನಿರ್ಬಂಧಗಳ ಜಾಲದ ಮೂಲಕ ಇರಾನ್ ಆರ್ಥಿಕತೆಯನ್ನು ದುರ್ಬಲಗೊಳಿಸುವ ಅಮೆರಿಕದ ಪ್ರಯತ್ನಗಳ ನೇತೃತ್ವವನ್ನು ಬೆಸೆಂಟ್ ವಹಿಸಿದ್ದಾರೆ. ಬೆಸೆಂಟ್ ಅವರು `ಇರಾನ್ ಆಡಳಿತದ ಬೆದರಿಕೆಗಳಿಂದ ವಿಚಲಿತರಾಗುವುದಿಲ್ಲ ಮತ್ತು ಇರಾನ್ ಆರ್ಥಿಕತೆಯನ್ನು ಕುಸಿಯುವಂತೆ ಮಾಡುತ್ತಿರುವ ಕ್ರಮಗಳನ್ನು ಜಾರಿಗೊಳಿಸುವುದನ್ನು ಮುಂದುವರಿಸುತ್ತಾರೆ ಎಂದು ಖಜಾನೆ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ಮಧ್ಯಪ್ರಾಚ್ಯ ಮತ್ತು ಅದರಾಚೆಗಿನ ಅಮೆರಿಕನ್ನರನ್ನು ಗುರಿಯಾಗಿಸುವ ತನ್ನ ಪ್ರಯತ್ನಗಳನ್ನು ಇರಾನ್ ಗಣನೀಯವಾಗಿ ಹೆಚ್ಚಿಸಿದೆ ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥ ಜೇ ಕ್ಲೇಟನ್ ಕಳೆದ ತಿಂಗಳು ಎಚ್ಚರಿಸಿದ್ದರು. ಇರಾನ್ನಿಂದ ಬಂದಿರುವ ವರದಿಯಾದ ಬೆದರಿಕೆಗಳ ಹಿನ್ನೆಲೆಯಲ್ಲಿ ಅಮೆರಿಕದ ಸೇನೆಯು ಇತ್ತೀಚಿನ ವಾರಗಳಲ್ಲಿ ಬ್ರಿಟನ್ನ ಎರಡು ನೆಲೆಗಳಿಂದ ಕೆಲವು ವಿಮಾನಗಳನ್ನು ಹಿಂಪಡೆದಿದೆ.






