ಯುಕೆಯಲ್ಲಿ ಅತ್ಯಾಚಾರ, ಲೈಂಗಿಕ ಕಳ್ಳಸಾಗಣೆ ಪ್ರಕರಣ | ಟ್ರಂಪ್ ಬೆಂಬಲಿಗರಾದ ಆಂಡ್ರ್ಯೂ ಟೇಟ್, ಟ್ರಿಸ್ಟಾನ್ ಟೇಟ್ ಅಮೆರಿಕದಲ್ಲಿ ಬಂಧನ

Photo credit : timesofindia
ಮಿಯಾಮಿ, ಜು. 19: ಯುನೈಟೆಡ್ ಕಿಂಗ್ಡಮ್ ನಲ್ಲಿ ಅತ್ಯಾಚಾರ ಮತ್ತು ಲೈಂಗಿಕ ಕಳ್ಳಸಾಗಣೆ ಆರೋಪಗಳನ್ನು ಎದುರಿಸುತ್ತಿರುವ ಸಾಮಾಜಿಕ ಮಾಧ್ಯಮ ಪ್ರಭಾವಿಗಳಾದ ಆಂಡ್ರ್ಯೂ ಟೇಟ್ ಹಾಗೂ ಅವರ ಸಹೋದರ ಟ್ರಿಸ್ಟಾನ್ ಟೇಟ್ ಅವರನ್ನು ಅಮೆರಿಕದ ಫ್ಲೋರಿಡಾದ ಮಿಯಾಮಿಯಲ್ಲಿ ಶನಿವಾರ ಬಂಧಿಸಲಾಗಿದೆ. ಬ್ರಿಟನ್ ಸಲ್ಲಿಸಿರುವ ಹಸ್ತಾಂತರ ಮನವಿಯ ಮೇರೆಗೆ ಅಮೆರಿಕದ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಮಹಿಳೆಯರ ವಿರುದ್ಧದ ವಿವಾದಾತ್ಮಕ ಹೇಳಿಕೆಗಳು ಮತ್ತು ಸಾಮಾಜಿಕ ಮಾಧ್ಯಮ ಚಟುವಟಿಕೆಗಳಿಂದ ಸುದ್ದಿಯಾಗಿರುವ ಟೇಟ್ ಸಹೋದರರನ್ನು ಮೊಹರು ಮಾಡಲಾದ ಬಂಧನ ವಾರಂಟ್ ಆಧರಿಸಿ ಅಮೆರಿಕದ ಮಾರ್ಷಲ್ಸ್ ಸೇವೆ ಬಂಧಿಸಿದೆ.ಯುಎಸ್ ಮಾರ್ಷಲ್ಸ್ ಸೇವೆಯ ವಕ್ತಾರ ಬ್ರಾಡಿ ಮೆಕ್ಕ್ಯಾರನ್ ಈ ವಿಷಯವನ್ನು ಅಸೋಸಿಯೇಟೆಡ್ ಪ್ರೆಸ್ಗೆ ದೃಢಪಡಿಸಿದ್ದಾರೆ.
ರೊಮೇನಿಯಾ, ಬ್ರಿಟನ್ ಮತ್ತು ಅಮೆರಿಕವನ್ನು ಒಳಗೊಂಡಿರುವ ಈ ಅಂತರರಾಷ್ಟ್ರೀಯ ಕಾನೂನು ಪ್ರಕ್ರಿಯೆಯಲ್ಲಿ, 2010ರಿಂದ 2017ರ ನಡುವೆ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಅವರನ್ನು ಲೈಂಗಿಕ ಕಳ್ಳಸಾಗಣೆಗೆ ಒಳಪಡಿಸಿದ ಆರೋಪದಡಿ ಟೇಟ್ ಸಹೋದರರನ್ನು ಹಸ್ತಾಂತರಿಸುವಂತೆ ಬ್ರಿಟಿಷ್ ಪ್ರಾಸಿಕ್ಯೂಟರ್ ಗಳು ಶನಿವಾರ ಅಧಿಕೃತವಾಗಿ ಮನವಿ ಮಾಡಿದ್ದಾರೆ.
ಅಮೆರಿಕ ಮತ್ತು ಬ್ರಿಟನ್ ನ ದ್ವಿಪೌರತ್ವ ಹೊಂದಿರುವ ಟೇಟ್ ಸಹೋದರರು 2016ರಲ್ಲಿ ರೊಮೇನಿಯಾಗೆ ತೆರಳಿದ್ದರು. ಮಹಿಳೆಯರನ್ನು ಲೈಂಗಿಕ ಶೋಷಣೆಗಾಗಿ ಆಮಿಷವೊಡ್ಡಿದ ಆರೋಪದಡಿ 2022ರಲ್ಲಿ ಅವರನ್ನು ರೊಮೇನಿಯಾದಲ್ಲಿ ಬಂಧಿಸಲಾಗಿತ್ತು. ಆದರೆ ಕಾನೂನು ಹಾಗೂ ಪ್ರಕ್ರಿಯಾತ್ಮಕ ಅಕ್ರಮಗಳ ಕಾರಣ ಪ್ರಕರಣ ಮುಂದುವರಿಯಲಿಲ್ಲ ಎಂದು ಅವರು ಹೇಳಿದ್ದಾರೆ.
ಸಹೋದರರು ಮುಂದಿನ ವಾರದ ಆರಂಭದಲ್ಲಿ ಮಿಯಾಮಿಯ ಫೆಡರಲ್ ನ್ಯಾಯಾಲಯದಲ್ಲಿ ಹಾಜರಾಗುವ ನಿರೀಕ್ಷೆಯಿದೆ ಎಂದು ಪ್ರಕರಣದ ಬಗ್ಗೆ ಮಾಹಿತಿ ಹೊಂದಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಯುನೈಟೆಡ್ ಕಿಂಗ್ಡಮ್ ನಲ್ಲಿ ಬಾಕಿ ಇರುವ ಆರೋಪಗಳ ಪ್ರಕಾರ, ಲಂಡನ್ ನ ಉತ್ತರ ಭಾಗದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪ ಟೇಟ್ ಸಹೋದರರ ವಿರುದ್ಧ ಕೇಳಿಬಂದಿದೆ. ಈ ಎಲ್ಲ ಆರೋಪಗಳನ್ನು ಅವರ ಪರ ವಕೀಲರು ನಿರಾಕರಿಸಿದ್ದಾರೆ.
'ಸುಳ್ಳು ಮತ್ತು ಅಪಪ್ರಚಾರ' :
ಟೇಟ್ ಸಹೋದರರ ಪರ ವಕೀಲ ಜೋಸೆಫ್ ಮೆಕ್ಬ್ರೈಡ್, ತಮ್ಮ ಕಕ್ಷಿದಾರರೊಂದಿಗೆ ಇನ್ನೂ ಮಾತನಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಯುಕೆಯಿಂದ ಹೊರಬಂದಿರುವ ಹೊಸ ಆರೋಪಗಳು "ಸುಳ್ಳು ಮತ್ತು ಅಪಪ್ರಚಾರ"ವಾಗಿದ್ದು, ಅಮೆರಿಕದಲ್ಲಿ ಟೇಟ್ ಸಹೋದರರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಗಳನ್ನು ಹಳಿತಪ್ಪಿಸುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
"ಈ ವ್ಯಕ್ತಿಗಳಿಗೆ ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸುವ ಅವಕಾಶ ಸಿಗದಂತೆ ಮಾಡಲು ಎಲ್ಲ ಪ್ರಯತ್ನಗಳೂ ನಡೆಯುತ್ತಿವೆ. ಸಮರ್ಥ ನ್ಯಾಯಾಧೀಶರು ಪ್ರಕರಣದ ಸತ್ಯಾಂಶಗಳನ್ನು ಪರಿಶೀಲಿಸಿದ ಬಳಿಕ ಹಾಗೂ ಅಮೆರಿಕದ ನ್ಯಾಯ ಇಲಾಖೆ ತನ್ನ ಅಧಿಕಾರದ ದುರುಪಯೋಗವನ್ನು ಗಮನಿಸಿದ ನಂತರ ಆಂಡ್ರ್ಯೂ ಮತ್ತು ಟ್ರಿಸ್ಟಾನ್ ಟೇಟ್ ಮುಕ್ತರಾಗಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ಬ್ರಿಟನ್ ನ ರಾಜಕೀಯ ಉದ್ದೇಶಗಳಿಗೆ ಅಮೆರಿಕ ಸಾಧನವಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.
ವಿವಾದಗಳಿಂದಲೇ ಗುರುತಿಸಿಕೊಂಡ ಟೇಟ್ :
39 ವರ್ಷದ ಆಂಡ್ರ್ಯೂ ಟೇಟ್ 2016ರಲ್ಲಿ ಬ್ರಿಟನ್ ನ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮ 'ಬಿಗ್ ಬ್ರದರ್' ಮೂಲಕ ಮುಖ್ಯವಾಹಿನಿಯ ಪ್ರೇಕ್ಷಕರಿಗೆ ಪರಿಚಿತರಾದರು. ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವುದಾಗಿ ಹೇಳಲಾದ ವಿಡಿಯೊ ಬಹಿರಂಗವಾದ ನಂತರ ಅವರನ್ನು ಕಾರ್ಯಕ್ರಮದಿಂದ ಹೊರಹಾಕಲಾಗಿತ್ತು.
ಆಂಡ್ರ್ಯೂ ಟೇಟ್ ಮತ್ತು 38 ವರ್ಷದ ಟ್ರಿಸ್ಟಾನ್ ಟೇಟ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಹಿರಂಗ ಬೆಂಬಲಿಗರಾಗಿದ್ದಾರೆ.
ಆಂಡ್ರ್ಯೂ ಟೇಟ್ ಅವರಿಗೆ X ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ 1 ಕೋಟಿಗೂ ಅಧಿಕ ಫಾಲೋವರ್ ಗಳಿದ್ದಾರೆ. ಆದರೆ ದ್ವೇಷ ಭಾಷಣ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ YouTube, TikTok ಹಾಗೂ Instagram ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮ ವೇದಿಕೆಗಳು ಅವರನ್ನು ನಿಷೇಧಿಸಿವೆ.
ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ತಮ್ಮ ಮೇಲಿನ ದಾಳಿಗೆ ತಾವೂ ಕೆಲಮಟ್ಟಿಗೆ ಹೊಣೆಗಾರರು ಎಂಬ ಹೇಳಿಕೆ, ಮಹಿಳೆಯರ ಮೇಲೆ ಹಿಂಸಾಚಾರ ನಡೆಸುವ ಕುರಿತು ನೀಡಿದ ವಿವಾದಾತ್ಮಕ ವಿವರಣೆಗಳು ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುವವರ ಬಗ್ಗೆ ಮಾಡಿದ ಟೀಕೆಗಳು ವ್ಯಾಪಕ ಖಂಡನೆಗೆ ಗುರಿಯಾಗಿದ್ದವು.
ಆದರೆ, ಟೇಟ್ ಸಹೋದರರು ತಮ್ಮ ವಿರುದ್ಧದ ನಿಂದನೆ, ಮಾನವ ಕಳ್ಳಸಾಗಣೆ ಹಾಗೂ ಇತರ ಎಲ್ಲ ಆರೋಪಗಳನ್ನು ನಿರಂತರವಾಗಿ ನಿರಾಕರಿಸಿದ್ದಾರೆ. ತಮ್ಮ ಹಿಂಸಾತ್ಮಕ ಮತ್ತು ಸ್ತ್ರೀದ್ವೇಷದ ಹೇಳಿಕೆಗಳನ್ನು ಆ ಸಂದರ್ಭದಿಂದ ಹೊರತೆಗೆದು ತಪ್ಪಾಗಿ ಬಿಂಬಿಸಲಾಗಿದೆ ಅಥವಾ ಅವು ಹಾಸ್ಯದ ಉದ್ದೇಶದಿಂದ ಮಾಡಿದ್ದವು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.






