ಪಾಕಿಸ್ತಾನದ ಗಗನಸಖಿ ಕೆನಡಾದಲ್ಲಿ ನಾಪತ್ತೆ

Photo : PTI
ಒಟ್ಟಾವ: ಪಾಕಿಸ್ತಾನದ ಇಸ್ಲಮಾಬಾದ್ನಿಂದ ಕೆನಡಾದ ಟೊರಂಟೊಗೆ ಸೋಮವಾರ ಆಗಮಿಸಿದ ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್(ಪಿಐಎ)ನ ಗಗನಸಖಿ ಟೊರಂಟೊದಲ್ಲಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಟೊರಂಟೊದಲ್ಲಿ ತನ್ನ ಹೋಟೆಲ್ ಕೋಣೆಯಲ್ಲಿ `ಧನ್ಯವಾದಗಳು ಪಿಐಎ' ಎಂಬ ಚೀಟಿಯ ಜತೆಗೆ ತನ್ನ ಸಮವಸ್ತ್ರವನ್ನು ಇಟ್ಟು ಗಗನಸಖಿ ಮರ್ಯಾಮ್ ರಝಾ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ `ಡಾನ್' ವರದಿ ಮಾಡಿದೆ. ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಪಾಕಿಸ್ತಾನದಲ್ಲಿ ತಮ್ಮ ಭವಿಷ್ಯದ ಕುರಿತ ಅನಿಶ್ಚಿತತೆಯ ಕಾರಣ ವೃತ್ತಿಪರರು ವಿದೇಶದಲ್ಲಿ ಆಶ್ರಯ ಪಡೆಯುವ ಪ್ರಮಾಣ ಹೆಚ್ಚಿದೆ. ಕಳೆದ ತಿಂಗಳು ಪಿಐಎ ಫ್ಲೈಟ್ ಅಟೆಂಡೆಂಟ್ ಫೈಝಾ ಮುಖ್ತಾರ್ ಕರಾಚಿಯಿಂದ ಕೆನಡಾಕ್ಕೆ ಆಗಮಿಸಿದ ಬಳಿಕ ನಾಪತ್ತೆಯಾಗಿದ್ದರು ಎಂದು ಪಿಐಎ ವಕ್ತಾರ ಅಬ್ದುಲ್ಲಾ ಹಫೀಝ್ ಖಾನ್ ಹೇಳಿದ್ದಾರೆ.
ಕಳೆದ ವರ್ಷ ಪಿಐಎ ಸಂಸ್ಥೆಯ ಕನಿಷ್ಠ 7 ಸಿಬಂದಿಗಳು ಕೆನಡಾದಲ್ಲಿ ನಾಪತ್ತೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೆನಡಾದಲ್ಲಿ `ಆಶ್ರಯ ನಿಯಮ' ಸರಳಗೊಳಿಸಿರುವುದು ಪಾಕಿಸ್ತಾನದ ವೃತ್ತಿಪರರು ಕೆನಡಾದಲ್ಲಿ ಆಶ್ರಯ ಕೋರಲು ಪ್ರಮುಖ ಕಾರಣ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ





