ಉತ್ತರ ಐರ್ಲ್ಯಾಂಡ್ನಲ್ಲಿ ಮುಂದುವರಿದ ವಲಸಿಗ ವಿರೋಧಿ ಹಿಂಸಾಚಾರ

Photo Credit : aljazeera.com
ಬೆಲ್ಫಾಸ್ಟ್,ಜೂ.11: ಉತ್ತರ ಐರ್ಲ್ಯಾಂಡ್ನಲ್ಲಿ ವಲಸಿಗ ವಿರೋಧಿ ಪ್ರತಿಭಟನೆ ಬುಧವಾರ ಎರಡನೇ ದಿನಕ್ಕೆ ಕಾಲಿರಿಸಿದ್ದು, ಹಿಂಸಾನಿರತ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿಗಳನ್ನು ಪ್ರಯೋಗಿಸಿದರು.
ಬುಧವಾರದಂದು ಬೆಲ್ಫಾಸ್ಟ್ ನಗರ ಸಮೀಪದ ನ್ಯೂಟೌನ್ಅಬ್ಬೆ ಎಂಬಲಿ ಪೊಲೀಸ್ ವಾಹನಗಳು ಹಾಗೂ ಅಧಿಕಾರಿಗಳ ಮೇಲೆ ಮಾರಕವಸ್ತುಗಳನ್ನು ಪ್ರತಿಭಟನಕಾರರು ಎಸೆದಿದ್ದಾರೆ. ಗಲಭೆಗೆ ಸಂಬಂಧಿಸಿ ಕನಿಷ್ಠ 16 ಮಂದಿಯನ್ನು ಬಂಧಿಸಲಾಗಿದ್ದು, ಇಬ್ಬರ ಮೇಲೆ ದೋಷಾರೋಪ ಹೊರಿಸಲಾಗಿದೆ.
ಸೂಡಾನ್ ಮೂಲದ ವ್ಯಕ್ತಿಯೊಬ್ಬನ ಮೇಲೆ ಚೂರಿಯಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಡೆದ ಬಳಿಕ ಬೆಲ್ಫಾಸ್ಟ್ ನಗರದಲ್ಲಿ ಮಂಗಳವಾರ ಗಲಭೆ ಭುಗಿಲೆದ್ದಿತ್ತು.
ಮುಖವಾಡಗಳನ್ನು ಧರಿಸಿದ ಪ್ರತಿಭಟನಕಾರರು ವಲಸಿಗ ಸಮುದಾಯದವರ ಮನೆಗಳು ಹಾಗೂ ವಾಹನಗಳು, ಅಂಗಡಿಮುಂಗಟ್ಟೆಗಳು, ಬಸ್ಗಳು, ಕಾರುಗಳಿಗೆ ಬೆಂಕಿ ಹಚ್ಚಿದ್ದರು. ಹಿಂಸಾಚಾರಕ್ಕೆ ಬೆದರಿ ಹಲವಾರು ವಲಸಿಗರು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದರು. ನಿರ್ಮಾಣ ಹಂತದಲ್ಲಿದ್ದ ಭಾರತೀಯರೊಬ್ಬರ ದಿನಸಿ ಅಂಗಡಿಯ ಕಟ್ಟಡಕ್ಕೂ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದರು.




