ರಶ್ಯ ಅಧ್ಯಕ್ಷೀಯ ಚುನಾವಣೆ : ಯುದ್ಧ ವಿರೋಧಿಸಿದ್ದ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ
ಮಾಸ್ಕೊ: ಉಕ್ರೇನ್ನಲ್ಲಿ ಶಾಂತಿ ಸ್ಥಾಪನೆಗೆ ಕರೆ ನೀಡಿದ್ದ ರಶ್ಯದ ರಾಜಕಾರಣಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರವನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿರುವುದಾಗಿ ವರದಿಯಾಗಿದೆ.
ಮಾಜಿ ಸಂಸದೆ ಯೆಕತೆರಿನಾ ಡುಂಟ್ಸೋವ ಅವರ ಪರವಾಗಿ ಬೆಂಬಲಿಗರ ಗುಂಪು ಸಲ್ಲಿಸಿದ ನಾಮಪತ್ರದ ಜತೆಗೆ ಸಲಿಸಿದ ದಾಖಲೆಗಳಲ್ಲಿ ಹಲವು ತಪ್ಪುಗಳಿರುವುದರಿಂದ ನಾಮಪತ್ರವನ್ನು ತಿರಸ್ಕರಿಸುವುದಾಗಿ ಚುನಾವಣಾ ಆಯೋಗ ಹೇಳಿದೆ. `ಎಲ್ಲರನ್ನೂ ಗೌರವಿಸುವ, ಎಲ್ಲರೊಂದಿಗೂ ಸಹಕರಿಸುವ ಮತ್ತು ಶಾಂತಿ, ಸ್ನೇಹವನ್ನು ಗೌರವಿಸುವ ಸಿದ್ಧಾಂತ ಹೊಂದಿರುವ ಮಾನವೀಯ ರಶ್ಯ'ದ ಪ್ರತಿಪಾದಕಿ ಆಗಿರುವ ಡುಂಟ್ಸೋವ ಮುಂದಿನ ವರ್ಷದ ಮಾರ್ಚ್ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಸಂಭಾವ್ಯ ಎದುರಾಳಿ ಎಂದು ಬಿಂಬಿಸಲ್ಪಟ್ಟಿದ್ದರು. ಆದರೆ ಇದೀಗ ಅವರ ನಾಮಪತ್ರ ತಿರಸ್ಕೃತಗೊಂಡಿರುವುದು ದೊಡ್ಡ ಹಿನ್ನಡೆಯಾಗಿದೆ.
ಆಯೋಗದ ಕ್ರಮವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಯೆಕತೆರಿನಾ ಡುಂಟ್ಸೋವ ಹೇಳಿದ್ದಾರೆ. ರಶ್ಯದ ಕಾನೂನಿನ ಪ್ರಕಾರ ಪಕ್ಷೇತರ ಅಭ್ಯರ್ಥಿಯ ನಾಮಪತ್ರಕ್ಕೆ ಕನಿಷ್ಟ 500 ಬೆಂಬಲಿಗರು ನಾಮನಿರ್ದೇಶನ ಮಾಡಬೇಕು. ಈ ಪ್ರಕಾರ ತಾನು 500 ಬೆಂಬಲಿಗರ ನಾಮನಿರ್ದೇಶನ ಹೊಂದಿದ್ದ ನಾಮಪತ್ರವನ್ನು ಡಿಸೆಂಬರ್ 20ರಂದು ಸಲ್ಲಿಸಿದ್ದೆ. ಡಿಸೆಂಬರ್ 23ರಂದು ನನ್ನ ನಾಮನಿರ್ದೇಶನದ ಗುಂಪನ್ನು ಮಾನ್ಯ ಮಾಡಲು ಆಯೋಗ ನಿರಾಕರಿಸಿದೆ. ಜತೆಗೆ ಹೆಸರುಗಳ ಕಾಗುಣಿತ ಸೇರಿದಂತೆ 100 ತಪ್ಪುಗಳನ್ನು ಪಟ್ಟಿ ಮಾಡಿದೆ. ಈಗ ಮತ್ತೊಮ್ಮೆ ಬೆಂಬಲಿಗರ ಗುಂಪಿನಿಂದ ನಾಮನಿರ್ದೇಶನ ಮಾಡಲು ಸಮಯವಿಲ್ಲದ ಕಾರಣ ತನ್ನನ್ನು ಅಭ್ಯರ್ಥಿಯಾಗಿ ಹೆಸರಿಸುವಂತೆ `ಯಬ್ಲೋಕೊ' ಪಕ್ಷದ ಮುಖಂಡರಿಗೆ ಕೋರಿಕೆ ಸಲ್ಲಿಸಿದ್ದೇನೆ ಎಂದು ಡುಂಟ್ಸೋವ ಹೇಳಿದ್ದಾರೆ.
ಈ ಮಧ್ಯೆ, ಯಬ್ಲೋಕೊ ಪಕ್ಷದ ಸ್ಥಾಪಕ ಮತ್ತು ಮುಖಂಡ ಗ್ರೆಗೊರಿ ಯವ್ಲಿಂಸ್ಕಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಮೂಲಗಳು ಹೇಳಿದ್ದು, ಯೆಕತೆರಿನಾ ಡುಂಟ್ಸೋವ ಅವರ ಕೋರಿಕೆಯ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಸ್ಪಷ್ಟಪಡಿಸಿವೆ. ಪುಟಿನ್ ಡಿಸೆಂಬರ್ 18ರಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದುವರೆಗೆ 29 ನಾಮಪತ್ರ ಸಲ್ಲಿಕೆಯಾಗಿದ್ದು ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಷ್ಟೂ ಪುಟಿನ್ಗೆ ಗೆಲುವು ಸುಲಭವಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.







