ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಅನ್ವರ್- ಉಲ್- ಹಕ್ ಕಾಕರ್ ಪ್ರಮಾಣ ವಚನ ಸ್ವೀಕಾರ

ಅನ್ವರ್- ಉಲ್- ಹಕ್ ಕಾಕರ್.| Photo: NDTV
ಇಸ್ಲಮಾಬಾದ್: ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯಂದು ಅನ್ವರ್- ಉಲ್- ಹಕ್ ಕಾಕರ್ ಹಂಗಾಮಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದಕ್ಕೂ ಮುನ್ನ ತಮ್ಮ ಸರ್ಕಾರದ ಅವಧಿ ಮುಕ್ತಾಯಗೊಂಡಿದ್ದರಿಂದ ಪ್ರಧಾನಿ ಶೆಹಬಾಝ್ ಶರೀಫ್ ಸಂಸತ್ತನ್ನು ವಿಸರ್ಜಿಸಿದ್ದರು. ಸಾಮಾನ್ಯವಾಗಿ ಇದೊಂದು ಔಪಚಾರಿಕ ಪ್ರಕ್ರಿಯೆಯಾಗಿದ್ದು, ಸಂಸತ್ ವಿಸರ್ಜನೆಗೊಂಡ 90 ದಿನಗಳೊಳಗಾಗಿ ಸಾರ್ವತ್ರಿಕ ಚುನಾವಣೆಯನ್ನು ನಡೆಸಬೇಕಾಗಿದೆ ಎಂದು livemint.com ವರದಿ ಮಾಡಿದೆ.
AFP ಸುದ್ದಿ ಸಂಸ್ಥೆಯ ವರದಿ ಪ್ರಕಾರ, ರವಿವಾರ ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ, ಪಾಕಿಸ್ತಾನದ ಸ್ವಾತಂತ್ರ್ಯ ದಿನವಾದ ಇಂದು (ಸೋಮವಾರ) ಕಾಕರ್ ಅವರು ರಾಷ್ಟ್ರಾಧ್ಯಕ್ಷ ಆರಿಫ್ ಅಲ್ವಿ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕಾಕರ್ ಅವರು ರಾಜಕೀಯಕ್ಕೆ ಬಹುತೇಕ ಹೊಸಬರಾಗಿದ್ದು, ಸೇನೆಯೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದಾರೆ. ಅವರು 2018ರಿಂದ ಬಲೂಚಿಸ್ತಾನ ಪ್ರಾಂತ್ಯವನ್ನು ಪ್ರತಿನಿಧಿಸುತ್ತಿದ್ದಾರೆ.
ಮತದಾರರು ನೂತನ ಸರ್ಕಾರವನ್ನು ಚುನಾಯಿಸುವವರೆಗೂ ಚುನಾವಣೆಯ ಉಸ್ತುವಾರಿ ವಹಿಸಲು ಹಾಗೂ ಸರ್ಕಾರದ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಪ್ರಧಾನಿ ಹುದ್ದೆಯಿಂದ ನಿರ್ಗಮಿಸುತ್ತಿರುವ ಪ್ರಧಾನಿ ಶೆಹಬಾಝ್ ಶರೀಪ್ ಹಾಗೂ ವಿರೋಧ ಪಕ್ಷದ ನಾಯಕ ರಾಝಾ ರಿಯಾಝ್, ಕಾಕರ್ ಅವರ ಹೆಸರನ್ನು ಹಂಗಾಮಿ ಪ್ರಧಾನಿ ಹುದ್ದೆಗೆ ಸೂಚಿಸಿದ್ದರು. ಹೀಗಾಗಿ ಸಣ್ಣ ಪಕ್ಷವಾದ ಬಲೂಚಿಸ್ತಾನ ಅವಾಮಿ ಪಕ್ಷದ ಮುಖ್ಯಸ್ಥ ಹುದ್ದೆ ಹಾಗೂ ಸಂಸದ ಸ್ಥಾನಗಳೆರಡನ್ನೂ ಕಾಕರ್ ಅವರು ರವಿವಾರ ತ್ಯಜಿಸಿದ್ದರು ಎಂದು AP ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಾಮಾನ್ಯವಾಗಿ, ಪಾಕಿಸ್ತಾನದಲ್ಲಿ ಚುನಾವಣೆಯ ಸಂದರ್ಭದಲ್ಲಿ ಹಂಗಾಮಿ ಆಡಳಿತಗಾರರನ್ನು ನೇಮಿಸಲಾಗುತ್ತದೆ. ಪಾಕಿಸ್ತಾನದ ಸಂವಿಧಾನದ ಪ್ರಕಾರ, ಮುಂದಿನ 90 ದಿನಗಳೊಳಗಾಗಿ ಸಾರ್ವತ್ರಿಕ ಚುನಾವಣೆ ನಡೆಯಬೇಕಿದೆ.
ಕಳೆದ ವರ್ಷ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿದ ನಂತರ, ಪಾಕಿಸ್ತಾನಲ್ಲಿ ತೀವ್ರ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ.