ಓಲೈಕೆಯು ಶಾಂತಿಯನ್ನು ತರುವುದಿಲ್ಲ: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿರುವ ದೇಶಗಳಿಗೆ ಚೀನಾ ಎಚ್ಚರಿಕೆ

ಸಾಂದರ್ಭಿಕ ಚಿತ್ರ | PC : freepik.com
ಬೀಜಿಂಗ್: ಚೀನಾದ ಹಿತಾಸಕ್ತಿಗಳಿಗೆ ಹಾನಿಯಾಗುವ ರೀತಿಯಲ್ಲಿ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿರುವ ದೇಶಗಳನ್ನು ತರಾಟೆಗೆತ್ತಿಕೊಂಡಿರುವ ಚೀನಾ, ಈ ದೇಶಗಳ ವಿರುದ್ಧ ಪ್ರತಿಕ್ರಮದ ಎಚ್ಚರಿಕೆ ನೀಡಿದೆ. ಓಲೈಕೆಯು ಯಾವತ್ತೂ ಶಾಂತಿಯನ್ನು ತರುವುದಿಲ್ಲ ಮತ್ತು ರಾಜಿ ಮಾಡಿಕೊಳ್ಳುವುದು ಗೌರವದ ನಡೆಯಲ್ಲ. ಇತರರ ಹಿತಾಸಕ್ತಿಗಳನ್ನು ಬಲಿಕೊಟ್ಟು ತಾತ್ಕಾಲಿಕ, ಸ್ವಾರ್ಥಿ ಹಿತಾಸಕ್ತಿಗಳನ್ನು ಹುಡುಕುವುದು ಹುಲಿಯ ಚರ್ಮವನ್ನು ಹುಡುಕಿದಂತೆ. ಇಂತಹ ವಿಧಾನಗಳು ಅಂತಿಮವಾಗಿ ಎರಡೂ ತುದಿಗಳಲ್ಲಿ ವಿಫಲಗೊಳ್ಳುತ್ತವೆ ಮತ್ತು ಇತರರಿಗೆ ಹಾನಿ ಮಾಡುತ್ತದೆ ಎಂದು ಚೀನಾದ ವಾಣಿಜ್ಯ ಇಲಾಖೆಯ ಹೇಳಿಕೆ ತಿಳಿಸಿದೆ.
ಚೀನಾದ ಹಿತಾಸಕ್ತಿಗಳಿಗೆ ಹಾನಿಯಾಗುವ ಯಾವುದೇ ಒಪ್ಪಂದವನ್ನು ಅಮೆರಿಕದೊಂದಿಗೆ ಮುಂದುವರಿಸದಂತೆ ದೇಶಗಳಿಗೆ ಚೀನಾ ಎಚ್ಚರಿಕೆ ನೀಡಿದೆ.
ಅಮೆರಿಕ ಮತ್ತು ಚೀನಾದ ನಡುವಿನ ಸುಂಕ ಸಮರ ತೀವ್ರಗೊಂಡಿರುವ ನಡುವೆಯೇ ಚೀನಾವನ್ನು ಹೊರತುಪಡಿಸಿ ಉಳಿದ ದೇಶಗಳಿಗೆ ಪರಸ್ಪರ ಸುಂಕಕ್ಕೆ 90 ದಿನ ತಡೆ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಬಳಿಕ ಹಲವು ದೇಶಗಳು ಸುಂಕ ಕಡಿಮೆಗೊಳಿಸುವ ಬಗ್ಗೆ ಅಥವಾ ಪರಸ್ಪರ ಲಾಭದಾಯಕ ವ್ಯಾಪಾರ ಒಪ್ಪಂದದ ಬಗ್ಗೆ ಅಮೆರಿಕದ ಜತೆ ಮಾತುಕತೆಗೆ ಮುಂದಾಗಿವೆ. ವ್ಯಾಪಾರ ಸಮರವನ್ನು ಅಂತ್ಯಗೊಳಿಸಲು ಅಮೆರಿಕ ಮತ್ತು ಚೀನಾದ ನಡುವೆ ಒಪ್ಪಂದ ಸಾಧ್ಯವಾಗಬಹುದು ಎಂದು ಕಳೆದ ವಾರ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದರು.







