ವರ್ಣಭೇದ ನೀತಿ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ: ಫ್ರಾನ್ಸ್ ಗೆ ವಿಶ್ವಸಂಸ್ಥೆ ಆಗ್ರಹ

ಜಿನೀವಾ: ಫ್ರಾನ್ಸ್ನಲ್ಲಿ ಸತತ 4 ದಿನಗಳಿಂದ ಮುಂದುವರಿದಿರುವ ಹಿಂಸಾತ್ಮಕ ಪ್ರತಿಭಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ, ಫ್ರಾನ್ಸ್ ತನ್ನ ಪೊಲೀಸ್ ವ್ಯವಸ್ಥೆಯಲ್ಲಿರುವ ಆಳವಾದ ಜನಾಂಗೀಯ ತಾರತಮ್ಯ ಸಮಸ್ಯೆ ನಿವಾರಣೆಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಆಗ್ರಹಿಸಿದೆ.
ಟ್ರಾಫಿಕ್ ಪೊಲೀಸರ ಗುಂಡೇಟಿನಿಂದ 17 ವರ್ಷದ ಯುವಕ ಮೃತಪಟ್ಟಿರುವ ಘಟನೆ ಫ್ರಾನ್ಸ್ನ ಕಡಿಮೆ ಆದಾಯದ ಮತ್ತು ಬಹುಜನಾಂಗೀಯ ಉಪನಗರಗಳಲ್ಲಿ ಪೊಲೀಸರು ವರ್ಣಭೇದ ನೀತಿ ತೋರುತ್ತಿದ್ದಾರೆ ಎಂಬ ಆರೋಪವನ್ನು ಮತ್ತೆ ಮುನ್ನೆಲೆಗೆ ತಂದಿದೆ.
‘ಮಂಗಳವಾರ ಪೊಲೀಸರಿಂದ ಉತ್ತರ ಆಫ್ರಿಕನ್ ಮೂಲದ 17 ವರ್ಷದ ಯುವಕನ ಹತ್ಯೆಯಿಂದ ನಾವು ಕಳವಳಗೊಂಡಿದ್ದೇವೆ. ಪೊಲೀಸರಿಂದ ಹತ್ಯೆಯಾಗಿರುವುದು ಕಳವಳಕಾರಿಯಾಗಿದೆ.
ಸ್ವಯಂಪ್ರೇರಿತ ನರಹತ್ಯೆಯ ಆರೋಪದ ಕುರಿತು ತನಿಖೆ ಪ್ರಾರಂಭವಾಗಿರುವುದನ್ನು ಗಮನಿಸಿದ್ದೇವೆ. ಕಾನೂನು ಜಾರಿಯಲ್ಲಿನ ಜನಾಂಗೀಯತೆ ಮತ್ತು ತಾರತಮ್ಯದ ಆಳವಾದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಇದು ಸಕಾಲವಾಗಿದೆ’ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಂಸ್ಥೆಯ ವಕ್ತಾರೆ ರವೀನಾ ಶಾಂದಾಸಾನಿ ಜಿನೀವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
‘ಶಾಂತರೀತಿಯಲ್ಲಿ ಸಭೆ ಸೇರುವ, ಪ್ರತಿಭಟನೆ ನಡೆಸುವ ಮಹತ್ವವನ್ನೂ ಒತ್ತಿಹೇಳುತ್ತಿದ್ದೇವೆ. ಹಿಂಸಾತ್ಮಕ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಅಧಿಕ ಶಕ್ತಿ ಬಳಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಕರೆ ನೀಡುತ್ತೇವೆ. ಕಾನೂನುಬದ್ಧತೆ, ಅಗತ್ಯತೆ, ಪ್ರಮಾಣಾನುಗುಣತೆ, ತಾರತಮ್ಯರಹಿತ, ಮುನ್ನೆಚ್ಚರಿಕೆ ಮತ್ತು ಹೊಣೆಗಾರಿಕೆಯ ತತ್ವಗಳನ್ನು ಅಧಿಕಾರಿಗಳು ಗೌರವಿಸಬೇಕು. ಪೊಲೀಸರು ಅಧಿಕ ಬಲಪ್ರಯೋಗಿಸಿದ್ದಾರೆ ಎಂಬ ದೂರಿನ ಬಗ್ಗೆ ತ್ವರಿತ ವಿಚಾರಣೆ ನಡೆಸಬೇಕು’ ಎಂದವರು ಹೇಳಿದ್ದಾರೆ.
ಫ್ರಾನ್ಸ್ನಲ್ಲಿ ಭುಗಿಲೆದ್ದ ಗಲಭೆಯ ಬಗ್ಗೆ, ಹಿಂಸಾಚಾರದಲ್ಲಿ ಹಲವು ಪೊಲೀಸರು ಗಾಯಗೊಂಡಿರುವ ಬಗ್ಗೆ ವಿಶ್ವಸಂಸ್ಥೆಗೆ ಕಳವಳವಿದೆ. ಪ್ರತಿಭಟನೆಯ ಸಂದರ್ಭವನ್ನು ಸಮಾಜ ವಿರೋಧಿ ಶಕ್ತಿಗಳು ಲೂಟಿ ಮತ್ತು ಹಿಂಸಾಚಾರಕ್ಕೆ ಬಳಸಿಕೊಳ್ಳುವ ಸಂದರ್ಭಗಳಿವೆ ಎಂದು ರವೀನಾ ಶಾಂದಾಸಾನಿ ಹೇಳಿದ್ದಾರೆ.
ಸ್ವತಂತ್ರ ತಜ್ಞರ ಸಂಘಟನೆಯಾಗಿರುವ ‘ಜನಾಂಗೀಯ ತಾರತಮ್ಯ ನಿರ್ಮೂಲನೆಗೆ ವಿಶ್ವಸಂಸ್ಥೆ ಸಮಿತಿ’ಯು ಎಲ್ಲಾ ರೀತಿಯ ಜನಾಂಗೀಯ ತಾರತಮ್ಯದ ಪ್ರಕರಣಗಳನ್ನು ತೊಡೆದುಹಾಕುವ ಕಾನೂನುಗಳನ್ನು ದೇಶಗಳು ಯಾವ ರೀತಿ ಜಾರಿಗೊಳಿಸಿವೆ ಎಂಬ ಬಗ್ಗೆ ಮೇಲ್ವಿಚಾರಣೆ ನಡೆಸುತ್ತದೆ. ಫ್ರಾನ್ಸ್ನಲ್ಲಿ ಕೆಲವು ಅಲ್ಪಸಂಖ್ಯಾತ ಗುಂಪುಗಳ ಸದಸ್ಯರನ್ನು ಅಸಮಾನವಾಗಿ ಗುರಿಯಾಗಿಸಿಕೊಂಡು ಆಗಾಗ ಗುರುತಿನ ಪರಿಶೀಲನೆ, ದಂಡ ಇತ್ಯಾದಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಕಳೆದ ಡಿಸೆಂಬರ್ನಲ್ಲಿ ಸಮಿತಿಯು ಕಳವಳ ವ್ಯಕ್ತಪಡಿಸಿತ್ತು.