ಸೌದಿ ಅರೇಬಿಯದ ರಾಸ್ ತನುರಾದಲ್ಲಿ Aramco ಹೆಲಿಕಾಪ್ಟರ್ ಪತನ: ಕನಿಷ್ಠ 14 ಮೃತ್ಯು

Photo Credit : @Arabian__KGB
ರಿಯಾದ್: ಸೌದಿ ಅರೇಬಿಯಾದ ರಾಸ್ ತನುರಾದಲ್ಲಿ ಸೌದಿ ಅರಾಮ್ಕೊಗೆ ಸೇರಿದ ಹೆಲಿಕಾಪ್ಟರ್ ರವಿವಾರ ಬೆಳಿಗ್ಗೆ ಅಪಘಾತಕ್ಕೀಡಾಗಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೌದಿ ಪ್ರೆಸ್ ಏಜೆನ್ಸಿ (ಎಸ್ಪಿಎ) ವರದಿ ಪ್ರಕಾರ, ರವಿವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ಸಂಭವಿಸಿದ ಈ ಅಪಘಾತದಲ್ಲಿ ಮೃತಪಟ್ಟ ಎಲ್ಲರೂ ಸೌದಿ ಅರೇಬಿಯ ನಾಗರಿಕರು ಎಂದು ತಿಳಿದು ಬಂದಿದೆ. ದಮ್ಮಾಮ್ - ಜುಬೈಲ್ ಬಳಿಯಿರುವ ರಾಸ್ ತನುರಾ ಪಶ್ಚಿಮ ಏಷ್ಯಾದ ಅತಿದೊಡ್ಡ ತೈಲ ಸಂಸ್ಕರಣಾಗಾರಗಳಲ್ಲಿ ಒಂದಾಗಿದ್ದು, ಅದನ್ನು ಸೌದಿ ಅರಾಮ್ಕೊ ನಿರ್ವಹಿಸುತ್ತದೆ.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸೌದಿ ಇಂಧನ ಸಚಿವಾಲಯವು ಸಂತಾಪ ಸೂಚಿಸಿದೆ.
"ಇಂಧನ ಸಚಿವಾಲಯವು ಮೃತರ ಕುಟುಂಬಗಳಿಗೆ ತನ್ನ ಆಳವಾದ ಸಂತಾಪ ಸೂಚಿಸುತ್ತದೆ. ಸರ್ವಶಕ್ತನಾದ ದೇವರು ಅವರಿಗೆ ಕರುಣೆ ಮತ್ತು ಕ್ಷಮೆಯನ್ನು ನೀಡಲಿ ಹಾಗೂ ಅವರನ್ನು ಹುತಾತ್ಮರಲ್ಲಿ ಸ್ವೀಕರಿಸಲಿ ಎಂದು ಪ್ರಾರ್ಥಿಸುತ್ತೇವೆ. ನಿಜಕ್ಕೂ ನಾವು ದೇವರಿಗೆ ಸೇರಿದವರು ಮತ್ತು ಆತನ ಬಳಿಗೇ ಹಿಂತಿರುಗುವವರು" ಎಂದು ಸಚಿವಾಲಯ ಎಸ್ಪಿಎಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.
ಸುಮಾರು ನಾಲ್ಕು ತಿಂಗಳ ಕಾಲ ಸ್ಥಗಿತಗೊಂಡಿದ್ದ ರಾಸ್ ತನುರಾ ಟರ್ಮಿನಲ್ನಲ್ಲಿ ಕಳೆದ ಶುಕ್ರವಾರ ಅರಾಮ್ಕೊ ಕಚ್ಚಾ ತೈಲ ಲೋಡಿಂಗ್ ಕಾರ್ಯಾಚರಣೆಯನ್ನು ಪುನರಾರಂಭಿಸಿತ್ತು. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಪರಿಸ್ಥಿತಿಯನ್ನು ತಾತ್ಕಾಲಿಕವಾಗಿ ತಗ್ಗಿಸಲು ಮಧ್ಯಂತರ ಒಪ್ಪಂದವಾದ ನಂತರ ಪಶ್ಚಿಮ ಏಷ್ಯಾದ ತೈಲ ಉತ್ಪಾದಕ ರಾಷ್ಟ್ರಗಳು ತೈಲ ಮತ್ತು ಅನಿಲ ಉತ್ಪಾದನೆ ಹಾಗೂ ರಫ್ತನ್ನು ಹೆಚ್ಚಿಸಿವೆ. ಈ ಹಿನ್ನೆಲೆಯಲ್ಲಿ ವಿಶ್ವದ ಅತಿದೊಡ್ಡ ತೈಲ ರಫ್ತುದಾರ ರಾಷ್ಟ್ರವಾದ ಸೌದಿ ಅರೇಬಿಯಾ ತೈಲ ಸಾಗಣೆ ಚಟುವಟಿಕೆಗಳನ್ನು ವೇಗಗೊಳಿಸಿದೆ.






