ಅರ್ಜೆಂಟೀನಾ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಚುನಾವಣೆ: ರಾಕ್ ಸ್ಟಾರ್ ಜೇವಿಯರ್ ಮುನ್ನಡೆ

Photo: Twitter
ಬ್ಯೂನಸ್ ಐರಿಸ್: ಕಟ್ಟಾ ಬಲಪಂಥೀಯ ಮುಖಂಡ ಹಾಗೂ ಜನಪ್ರಿಯ ರಾಕ್ ಸ್ಟಾರ್ ಜೇವಿಯರ್ ಮಿಲೀ ಮುಂದಿನ ಅಕ್ಟೋಬರ್ ನಲ್ಲಿ ನಡೆಯುವ ಅರ್ಜೆಂಟೀನಾ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಆಯ್ಕೆ ಮತದಾನದಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದೇಶದ ಅಧ್ಯಕ್ಷೀಯ ಅಭ್ಯರ್ಥಿಯ ಆಯ್ಕೆಗೆ ನಡೆದ ಪ್ರಾಥಮಿಕ ಸುತ್ತಿನ ಮತದಾನದಲ್ಲಿ ಶೇಕಡ 92ರಷ್ಟು ಮತಗಳ ಎಣಿಕೆ ಮುಗಿದಿದ್ದು, ರಾಕ್ ಗಾಯಕ, ಗುಂಗುರು ಕೂದಲಿನ ಆರ್ಥಿಕ ತಜ್ಞ ಹಾಗೂ ಸಂಸದರಾಗಿರುವ ಮಿಲೀ ಶೇಕಡ 30ರಷ್ಟು ಮತ ಗಳಿಸಿ ಮುನ್ನಡೆಯಲ್ಲಿದ್ದಾರೆ.
ಟ್ರಂಪ್ ಅವರ ಕಟ್ಟಾ ಅಭಿಮಾನಿಯಾಗಿರುವ ಇವರು, ಕೇಂದ್ರೀಯ ಬ್ಯಾಂಕನ್ನು ರದ್ದುಪಡಿಸಬೇಕು, ಹವಾಮಾನ ಬದಲಾವಣೆ ಎನ್ನುವುದು ಸುಳ್ಳು, ಲೈಂಗಿಕ ಶಿಕ್ಷಣ ಎನ್ನುವುದು ಕುಟುಂಬ ವ್ಯವಸ್ಥೆಯನ್ನು ನಾಶಪಡಿಸುವ ಹುನ್ನಾರ ಎಂದು ಅಭಿಪ್ರಾಯಪಟ್ಟಿದ್ದರು. ಮಾನವ ಅಂಗಾಂಗ ಮಾರಾಟವನ್ನು ಕಾನೂನುಬದ್ಧಗೊಳಿಸಬೇಕು ಹಾಗೂ ಕೈ ಬಂದೂಕು ಹೊಂದುವುದನ್ನು ಸುಲಭಗೊಳಿಸಬೇಕು ಎನ್ನುವುದು ಇವರ ಅಭಿಮತವಾಗಿತ್ತು.
'ರಾಜಕೀಯ ಜಾತಿ' ವಿರುದ್ಧ ಸಿಡಿದೆದ್ದ ಈ ಉದಯೋನ್ಮುಖ ಅಭ್ಯರ್ಥಿ ನಿರೀಕ್ಷೆಗಿಂತ ಹೆಚ್ಚು ಮುನ್ನಡೆ ಸಾಧಿಸಿದ್ದು, ಅಧ್ಯಕ್ಷೀಯ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಪ್ರಮುಖ ವಿರೋಧ ಪಕ್ಷಗಳ ಮೈತ್ರಿಕೂಟವಾದ ಯುನೈಟೆಡ್ ಫಾರ್ ಚೇಂಜ್ ಅಭ್ಯರ್ಥಿ ಆಕಾಂಕ್ಷಿಗಳು ಶೇಕಡ 28ರಷ್ಟು ಹಾಗೂ ಪ್ರಸ್ತುತ ಆಡಳಿತಾರೂಢ ಮೈತ್ರಿಕೂಟವಾದ ಯೂನಿಯನ್ ಫಾರ್ ದ ಹೋಮ್ ಲ್ಯಾಂಡ್ ಶೇಕಡ 27ರಷ್ಟು ಮತಗಳನ್ನು ಪಡೆದಿವೆ.
ಸಾಂಪ್ರದಾಯಿಕ ರಾಜಕಾರಣಿಗಳ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿರುವ ಅರ್ಜೆಂಟೀನಾ ಮತದಾರರು ಇದಕ್ಕಿಂತ ಭಿನ್ನವಾದ ಅಭ್ಯರ್ಥಿಗಳತ್ತ ಒಲವು ತೋರುವ ದೇಶವಾಗಿ ಮಾರ್ಪಟ್ಟಿದೆ. ವಾರ್ಷಿಕ ಹಣದುಬ್ಬರ ದರ ಶೇಕಡ 100ಕ್ಕಿಂತಲೂ ಅಧಿಕ ಇರುವ ದೇಶದಲ್ಲಿ, ಬಡತನ ತೀವ್ರವಾಗುತ್ತಿದೆ. ದೇಶದ ಕರೆನ್ಸಿ ಮೌಲ್ಯ ಗಣನೀಯವಾಗಿ ಕುಸಿಯುತ್ತಿದ್ದು, ಪೆಸೊ ಬದಲು ಅಮೆರಿಕನ್ ಡಾಲರ್ ಚಲಾವಣೆಗೆ ತರಲು ಬೆಂಬಲ ವ್ಯಕ್ತಪಡಿಸುವ ಮೂಲಕ ಮಿಲೀ ಜನರನ್ನು ಆಕರ್ಷಿಸಿದ್ದರು.







