ಶೇಕ್ ಹಸೀನಾ, ಪುತ್ರ ಸೇರಿ 18 ಮಂದಿ ವಿರುದ್ಧ ಬಂಧನ ವಾರೆಂಟ್

PC: x.com/haque_shahidul
ಢಾಕಾ : ಸರ್ಕಾರಿ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪದಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ, ಅವರ ಪುತ್ರ ಸಜೀಬ್ ವಾಜೀ ಸೇರಿದಂತೆ ಒಟ್ಟು 18 ಮಂದಿಯ ವಿರುದ್ಧ ಬಾಂಗ್ಲಾ ನ್ಯಾಯಾಲಯ ಮಂಗಳವಾರ ಬಂಧನ ವಾರೆಂಟ್ ಹೊರಡಿಸಿದೆ.
ಬಾಂಗ್ಲಾದೇಶದ ಭ್ರಷ್ಟಾಚಾರ ನಿಗ್ರಹ ಆಯೋಗ ಸಲ್ಲಿಸಿದ ಆರು ಭ್ರಷ್ಟಾಚಾರ ಪ್ರಕರಣಗಳ ಪೈಕಿ ಎರಡನ್ನು ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿದ ಬೆನ್ನಲ್ಲೇ ಬಂಧನ ವಾರೆಂಟ್ ಹೊರಡಿಸಲಾಗಿದೆ.
ಢಾಕಾ ವ್ಯಾಪ್ತಿಯ ಮತ್ತು ಇತರ ಜಿಲ್ಲೆಗಳ ವ್ಯಾಪ್ತಿಯ ಪೊಲೀಸರಿಗೆ ಈ ಬಗ್ಗೆ ನ್ಯಾಯಾಲಯ ಸೂಚನೆ ನೀಡಿ, ನೋಟಿಸ್ ಜಾರಿಯಾದ ಬಗ್ಗೆ ಎ.29ರ ಒಳಗೆ ವರದಿ ನೀಡುವಂತೆ ಆದೇಶಿಸಿದೆ. ಪೂರ್ವಾಚಲ ಹೊಸ ನಗರ ಯೋಜನೆಯ ರಾಜತಾಂತ್ರಿಕ ವಲಯವಾದ ಸೆಕ್ಟರ್-27ರಲ್ಲಿ ತಲಾ 10 ಕೊತ್ತಾ ಗಾತ್ರದ ಆರು ನಿವೇಶನಗಳ ಹಂಚಿಕೆಯ ಸಂಬಂಧ ಭ್ರಷ್ಟಾಚಾರ ನಿಗ್ರಹ ಆಯೋಗ ಆರು ಪ್ರಕರಣಗಳಲ್ಲಿ ದಾಖಲಿಸಿದೆ.
ಹಸೀನಾ ತಮ್ಮ ಹಿರಿಯ ಅಧಿಕಾರಿಗಳ ಜತೆ ಶಾಮೀಲಾಗಿ, ತಮಗೆ ಹಾಗೂ ಮಗ ಜಾಯ್, ಪುತ್ರಿ ಸೈಂಆ ವಾಝದ್ ಪುಟುಲ್, ಸಹೋದರಿ ಶೇಖ್ ರೆಹಾನಾ ಮತ್ತು ರೆಹಾನಾ ಮಕ್ಕಳಾದ ರದ್ವಾನ್ ಮುಜೀಬ್ ಸಿದ್ದಿಕ್ ಬಾಬ್ಬಿ, ಅಝೀಮಾ ಸಿದ್ದಿಕ್ ಮತ್ತು ಬ್ರಿಟನ್ ಸಂಸದ ತುಲಿಪ್ ಸಿದ್ದಿಕಿ ಸೇರಿದಂತೆ ತಮ್ಮ ಕುಟುಂಬದ ಹಲವು ಮಂದಿಗೆ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿಕೊಂಡಿದ್ದಾರೆ ಎಂದು ಆಯೋಗ ಆಪಾದಿಸಿದೆ. ಆರೋಪಿಗಳ ವಿರುದ್ಧದ ಎಲ್ಲಾ ಪ್ರಕರಣಗಳಲ್ಲಿ ದೇಶದ್ರೋಹದ ಆರೋಪ ಹೊರಿಸಲಾಗಿದೆ.