ಏಷ್ಯಾ ಕಪ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತ ಕ್ರಿಕೆಟ್ ತಂಡ

PC: x.com/Aaqibhafeez
ದುಬೈ, ಸೆ. 29: ಏಷ್ಯಾ ಕಪ್ ಫೈನಲ್ ನಲ್ಲಿ ಪಾಕಿಸ್ತಾನವನ್ನು ಅಂತಿಮ ಓವರ್ನಲ್ಲಿ ರೋಚಕವಾಗಿ ಮಣಿಸಿ ಚಾಂಪಿಯನ್ ಆದ ಭಾರತ ತಂಡದ ಪ್ರಶಸ್ತಿ ಪ್ರದಾನ ಸಮಾರಂಭ ಅಸಮಾಧಾನಕರವಾಗಿ ಮುಗಿಯಿತು. ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ತಂಡವು, ಏಷ್ಯಾ ಕ್ರಿಕೆಟ್ ಮಂಡಳಿ (ಎಸಿಸಿ) ಅಧ್ಯಕ್ಷ ಹಾಗೂ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಪರಿಣಾಮ, ಸಮಾರಂಭವೇ ಸ್ಥಗಿತಗೊಂಡಿತು.
ಟ್ರೋಫಿ ಹಸ್ತಾಂತರಕ್ಕಾಗಿ ವೇದಿಕೆ ಸಿದ್ಧವಾಗಿದ್ದರೂ, ನಖ್ವಿ ಸ್ವತಃ ಟ್ರೋಫಿ ನೀಡಬೇಕು ಎಂದು ಹಠ ಹಿಡಿದ ಕಾರಣ ಸಮಾರಂಭವು ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಯಿತು. ಭಾರತೀಯ ತಂಡವು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷ ಖಾಲಿದ್ ಅಲ್ ಜರೂನಿ ಅವರಿಂದ ಟ್ರೋಫಿ ಪಡೆಯಲು ಸಿದ್ಧವಾಗಿದ್ದರೂ, ಮೊಹ್ಸಿನ್ ನಖ್ವಿ ಅವರು ಅಡ್ಡಿಪಡಿಸಿದ್ದರಿಂದ ಗೊಂದಲವಾಯಿತು. ಕೊನೆಗೆ ಟ್ರೋಫಿ ವಿತರಣೆ ನಡೆಯದೇ, ಆಟಗಾರರು ಕೇವಲ ವೈಯಕ್ತಿಕ ಪ್ರಶಸ್ತಿಗಳನ್ನು ಸ್ವೀಕರಿಸಿ ಮೈದಾನ ತೊರೆದರು.
ನಖ್ವಿ ಅವರ ವಿವಾದಾತ್ಮಕ ಸಾಮಾಜಿಕ ಜಾಲತಾಣ ಪೋಸ್ಟ್ಗಳ ಪರಿಣಾಮವಾಗಿ ಭಾರತೀಯ ಕ್ರಿಕೆಟಿಗರು ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಏಷ್ಯಾ ಕಪ್ ಆರಂಭದಲ್ಲಿ ನಖ್ವಿ ಅವರು ಎಕ್ಸ್ ನಲ್ಲಿ “ಫೈನಲ್ ಡೇ” ಎಂಬ ಶೀರ್ಷಿಕೆಯೊಂದಿಗೆ ಒಂದು ಚಿತ್ರವನ್ನು ಹಂಚಿಕೊಂಡಿದ್ದರು. ಆ ಚಿತ್ರದಲ್ಲಿ ಪಾಕಿಸ್ತಾನ ಕ್ರಿಕೆಟಿಗರು, ನಾಯಕ ಸಲ್ಮಾನ್ ಅಘಾ ಹಾಗೂ ವೇಗಿ ಶಾಹೀನ್ ಶಾಹ್ ಅಫ್ರಿದಿ ಸೇರಿದಂತೆ ಹಲವರು ವಿಮಾನದ ಪೈಲಟ್ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದು, ಹಿನ್ನೆಲೆಯಲ್ಲಿ ಯುದ್ಧವಿಮಾನಗಳ ಚಿತ್ರಣವಿತ್ತು.
ಅಲ್ಲದೆ ನಖ್ವಿ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಒಳಗೊಂಡ ಪತನಗೊಳ್ಳುತ್ತಿರುವ ವಿಮಾನದ ಚಿತ್ರವನ್ನೂ ಪೋಸ್ಟ್ ಮಾಡಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, “ಟ್ರೋಫಿ ವಿತರಣೆ ಇಲ್ಲದೆ ಟೂರ್ನಮೆಂಟ್ ಮುಗಿಯುವುದು ಅಪರೂಪದ ಘಟನೆ. ಆದರೆ ನನ್ನ ನಿಜವಾದ ಟ್ರೋಫಿ ನನ್ನ 14 ಸಹ ಆಟಗಾರರು” ಎಂದು ಭಾವುಕವಾಗಿ ಹೇಳಿದರು.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಕೋಚ್ ಮತ್ತು ನಿರೂಪಕ ರವಿಶಾಸ್ತ್ರಿ, “ಜಯದ ನಂತರ ಆಟಗಾರರು 45 ನಿಮಿಷಗಳ ಕಾಲ ವೇದಿಕೆಯಲ್ಲಿ ನಿರರ್ಥಕವಾಗಿ ಕಾಯಬೇಕಾದ ಪರಿಸ್ಥಿತಿ ಹಾಸ್ಯಾಸ್ಪದ” ಎಂದು ಟೀಕಿಸಿದರು.
ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದ ಹಿನ್ನೆಲೆಯಲ್ಲಿ ಭಾರತದ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಹಸ್ತಲಾಘವವನ್ನು ನಿರಾಕರಿಸಿದ್ದರು.







