ಏಷ್ಯಾ ಕಪ್: ಪಿಸಿಬಿ ಅಧ್ಯಕ್ಷರ ವಿರುದ್ಧ ಇಮ್ರಾನ್ ಖಾನ್ ವಾಗ್ದಾಳಿ

PC: x.com/toisports
ಹೊಸದಿಲ್ಲಿ: ಏಷ್ಯಾಕಪ್ನಲ್ಲಿ ಸತತ ಮೂರು ಬಾರಿ ಭಾರತದ ವಿರುದ್ಧ ಸೋಲು ಅನುಭವಿಸಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ವ್ಯಾಪಕ ಟೀಕೆಗಳು ಹಾಗೂ ನಿಂದನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿವೆ. ಜತೆಗೆ ತಕ್ಷಣ ಈ ಹುದ್ದೆಯಿಂದ ಅವರನ್ನು ವಜಾಗೊಳಿಸುವಂತೆ ಒತ್ತಡ ಹೆಚ್ಚುತ್ತಿದೆ.
ಏಷ್ಯಾ ಕಪ್ ಜಯಿಸಿದ ಭಾರತ ತಂಡ, ಏಷ್ಯನ್ ಕ್ರಿಕೆಟ್ ಮಂಡಳಿ ಅಧ್ಯಕ್ಷರೂ ಆಗಿರುವ ನಖ್ವಿಯವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಗೊಂದಲದ ಗೂಡಾಯಿತು.
ನಖ್ವಿ ಟ್ರೋಫಿ ಹಿಡಿದು ಕಾಯುತ್ತಿದ್ದರೆ, ಭಾರತ ತಂಡ 15 ಯಾರ್ಡ್ ಅಂತರದಲ್ಲಿ ನಿಂತು ಮುಂದೆ ಹೋಗಲು ನಿರಾಕರಿಸಿತು. ಹಲವು ನಿಮಿಷ ವಿಳಂಬವದ ಬಳಿಕ ನಖ್ವಿ ಕ್ರಮೇಣ ವೇದಿಕೆಯಿಂದ ಹೊರನಡೆಯಲು ಮುಂದಾದರು. ಸ್ಟೇಡಿಯಂನಲ್ಲಿದ್ದ ಭಾರತದ ಅಭಿಮಾನಿಗಳಿಂದ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೇಳಿಬಂತು. ನಖ್ವಿಯವರಿಂದ ಭಾರತ ತಂಡ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಸಂಘಟಕರು ಹೇಳಿದ ಬಳಿಕ ವಿಜೇತ ತಂಡದ ಟ್ರೋಫಿ ಹಾಗೂ ಪದಕಗಳೊಂದಿಗೆ ನಖ್ವಿ ಹೊರ ನಡೆದರು.
ಪಾಕಿಸ್ತಾನದ ತೆಹ್ರಿಕ್ ಎ ಇನ್ಸಾಫ್ ಪಾರ್ಟಿ ಮುಖಂಡ ಮೂನಿಸ್ ಇಲಾಹಿ ಎಕ್ಸ್ ಪೋಸ್ಟ್ ನಲ್ಲಿ "ಪ್ರಧಾನಿ ಶೆಹಬಾಝ್ ಷರೀಫ್ ತಾಕತ್ತು ಇದ್ದರೆ ಅಲ್ಪಾವಧಿಯಲ್ಲೇ ಪಾಕಿಸ್ತಾನ ಕ್ರಿಕೆಟನ್ನು ಹಾಳು ಮಾಡಿದ ಮೊಹ್ಸಿನ್ ನಖ್ವಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ನಾಚಿಕೆಯಿಲ್ಲದ ವ್ಯಕ್ತಿಗೆ ಸ್ವಲ್ಪ ವಿಷಾದವೂ ಇಲ್ಲ; ಇದು ಅವರನ್ನು ನೇಮಕ ಮಾಡಿದವರನ್ನು ಪ್ರತಿಬಿಂಬಿಸುತ್ತದೆ. ತಕ್ಷಣ ಅವರನ್ನು ವಜಾ ಮಾಡಬೇಕು" ಎಂದು ಆಗ್ರಹಿಸಿದ್ದಾರೆ.
ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಕ್ರಿಕೆಟಿಗ ಇಮ್ರಾನ್ ಖಾನ್, "ಪಾಕಿಸ್ತಾನದ ಸೇನಾ ಮುಖ್ಯಸ್ಥರಾದ ಅಸೀಂ ಮುನೀರ್ ಪಾಕಿಸ್ತಾನಕ್ಕೆ ಏನು ಮಾಡುತ್ತಿದ್ದಾರೆಯೋ ಅದನ್ನೇ ನಖ್ವಿ ದೇಶದ ಕ್ರಿಕೆಟ್ ಗೆ ಮಾಡುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಉತ್ತಮ ಆಟಗಾರರನ್ನು ತಂಡದಿಂದ ನಖ್ವಿ ಕೈಬಿಟ್ಟದ್ದು ಭಾರತದ ವಿರುದ್ಧ ಸತತ ಮೂರು ಸೋಲುಗಳಿಗೆ ಕರಣ ಎಂದು ಸಿಂಧ್ ಗವರ್ನರ್ ಮೊಹ್ಮದ್ ಝುಬೈರ್ ವಿಶ್ಲೇಷಿಸಿದ್ದಾರೆ. ಒಳ್ಳೆಯ ಬ್ಯಾಟ್ಸ್ಮನ್ ಬಾಬರ್ ಆಝಮ್, ಉತ್ತಮ ವಿಕೆಟ್ ಕೀಪರ್ ರಿಜ್ವಾನ್ ಅವರಂಥ ಆಟಗಾರರನ್ನು ಕೈಬಿಟ್ಟು ಸಲ್ಮಾನ್ ಅಘಾ ಮತ್ತು ಹಾರಿಸ್ನಂಥವರನ್ನು ಆಯ್ಕೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.







