ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ | ಮೃತರ ಸಂಖ್ಯೆ 7ಕ್ಕೆ ಏರಿಕೆ, 150ಕ್ಕೂ ಅಧಿಕ ಜನರಿಗೆ ಗಾಯ

Photo | timesofindia
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟು,150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸುಮಾರು 5,23,000 ಜನಸಂಖ್ಯೆಯನ್ನು ಹೊಂದಿರುವ ಮಜಾರ್-ಎ ಶರೀಫ್ ಬಳಿ 28 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ಜಿಎಸ್ ತಿಳಿಸಿದೆ.
ಮಧ್ಯರಾತ್ರಿ 12.59ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದು, ಒಟ್ಟು 150 ಜನರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ವಕ್ತಾರ ಸಮೀಮ್ ಜೋಯಂಡಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ ರಕ್ಷಣಾ ಕಾರ್ಯಕರ್ತರು ಅವಶೇಷಗಳಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ.
ಇದೇ ಆಗಸ್ಟ್ನಲ್ಲಿ, ಅಫ್ಘಾನಿಸ್ತಾನದ ಪರ್ವತ ಪ್ರದೇಶದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿ ಕನಿಷ್ಠ 2,200 ಜನರು ಮೃತಪಟ್ಟಿದ್ದರು ಮತ್ತು 2,800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.





