ಗ್ವಾಟೆಮಾಲಾದಲ್ಲಿ ಗ್ಯಾಂಗ್ ವಾರ್ ಗೆ ಕನಿಷ್ಠ 7 ಬಲಿ

ಗ್ವಾಟೆಮಾಲಾ ಸಿಟಿ,ಜು.30:ನಗರದಲ್ಲಿ ಮಂಗಳವಾರ ನಡೆದ ಭೀಕರ ಗ್ಯಾಂಗ್ವಾರ್ನಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಹಾಗೂ 13 ಮಂದಿ ಗಾಯಗೊಂಡಿದ್ದಾರೆಂದು ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಬಾರಿಯೊ 18 ಹಾಗೂ ಎಂಎಸ್-13 ಗ್ಯಾಂಗ್ ಗಳ ನಡುವಿನ ವೈಷಮ್ಯವೇ ಈ ಹತ್ಯಾಕಾಂಡಕ್ಕೆ ಕಾರಣವೆಂದು ಕೇಂದ್ರ ಗೃಹ ಸಚಿವ ಫ್ರಾನ್ಸಿಸ್ಕೊ ಜಿಮೆನೆಝ್ ಆಪಾದಿಸಿದ್ದಾರೆ.
ಸೋಮವಾರ ಹತ್ಯೆಯಾದ ಬಾರಿಯೊ 18 ಗ್ಯಾಂಗ್ ನ ಸದಸ್ಯನೊಬ್ಬನ ಅಂತ್ಯಸಂಸ್ಕಾರದ ಸ್ಥಳದಲ್ಲಿ ಮಾರಾ ಸಲ್ವಾತ್ರುಚಾ (ಎಂಎಸ್-13) ಗ್ಯಾಂಗ್ ನ ಸಶಸ್ತ್ರ ಗುಂಪೊಂದು ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದೆಯೆಂದು ಜಿಮೆನೆಝ್ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಇತರ 13 ಮಂದಿ ಗಾಯಗೊಂಡಿದ್ದಾರೆ.. ಮೋಟಾರ್ ಬೈಕ್ ಗಳಲ್ಲಿ ಆಗಮಿಸಿದ ದಾಳಿಕೋರರು ಶೂಟೌಟ್ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆಂದು ಅವರು ಹೇಳಿದ್ದಾರೆ.
ಹತ್ಯಾಕಾಂಡ ನಡೆದ ಸ್ಥಳವನ್ನು ಪೊಲೀಸರು ಸುತ್ತುವರಿದಿದ್ದು, ಮುಂದಿನ ತನಿಖೆ ನಡೆಯುತ್ತಿದೆಯೆಂದು ಜಿಮೆನೆಜ್ ತಿಳಿಸಿದ್ದಾರೆ.
ಬಾರಿಯೊ 18 ಹಾಗೂ ಎಂ-13 ಗ್ಯಾಂಗ್ ಗಳು, ಗ್ವಾಟೆಮಾಲಾ ಪ್ರಾಂತದ ಭೂಗತಪ್ರಪಂಚದ ಮೇಲೆ ನಿಯಂತ್ರಣ ಸಾಧಿಸಲು ರಕ್ತಪಾತದಿಂದ ಕೂಡಿದ ಸಂಘರ್ಷವನ್ನು ನಡೆಸುತ್ತಲೇ ಬಂದಿದೆ. ಅಂಗಡಿಮಾಲಕರು, ಸಾರಿಗೆ ಕಾರ್ಮಿಕರು ಹಾಗೂ ನಾಗರಿಕರ ಸುಲಿಗೆ ಕೃತ್ಯಗಳಲ್ಲಿ ಅವು ನಿರತವಾಗಿದ್ದು, ಅದನ್ನು ವಿರೋಧಿಸುವವರನ್ನು ನಿರ್ದಯವಾಗಿ ಹತ್ಯೆಗೈಯುತ್ತಿವೆ.





