ರಶ್ಯದ ಧ್ವಜ ಹೊಂದಿದ್ದ ತೈಲ ಟ್ಯಾಂಕರನ್ನು ಅಟ್ಲಾಂಟಿಕ್ ಸಾಗರದಲ್ಲಿ ವಶಕ್ಕೆ ಪಡೆದ ಅಮೆರಿಕ

Screengrab : X
ನ್ಯೂಯಾರ್ಕ್: ವೆನೆಝುವೆಲಾದ ಬಳಿಯ ಸಮುದ್ರದಲ್ಲಿ ಕಳೆದ ಎರಡು ವಾರಗಳಿಂದ ಅಮೆರಿಕಾದ ದಿಗ್ಬಂಧನಕ್ಕೆ ಒಳಗಾಗಿದ್ದ ರಶ್ಯದ ಧ್ವಜ ಹೊಂದಿದ್ದ `ನಿರ್ಬಂಧಿತ' ತೈಲ ಟ್ಯಾಂಕರ್ ಅನ್ನು ಅಟ್ಲಾಂಟಿಕ್ ಸಾಗರದ ಬಳಿ ಅಮೆರಿಕಾ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಹಡಗಿನ ಭದ್ರತೆಗೆ ರಶ್ಯವು ಸಬ್ಮೆರಿನ್ ಮತ್ತು ಇತರ ನೌಕಾ ಹಡಗುಗಳನ್ನು ನಿಯೋಜಿಸಿತ್ತು. ಆದರೆ ತೈಲ ಟ್ಯಾಂಕರ್ ಅನ್ನು ಅಮೆರಿಕಾ ಅಧಿಕಾರಿಗಳು ವಶಕ್ಕೆ ಪಡೆದ ಸಂದರ್ಭ ಯಾವುದೇ ಬೆಂಗಾವಲು ಹಡಗು ಇರಲಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ `ವಾಲ್ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ.
ಅಮೆರಿಕಾದ ದಿಗ್ಬಂಧನದಿಂದ ತಪ್ಪಿಸಿಕೊಳ್ಳಲು ಈ ಖಾಲಿ ತೈಲ ಟ್ಯಾಂಕರ್ ಎರಡು ವಾರಗಳಿಂದ ಪ್ರಯತ್ನಿಸುತ್ತಿತ್ತು. ಟ್ಯಾಂಕರ್ ಅನ್ನು ರಶ್ಯಕ್ಕೆ ಸಂಪರ್ಕ ಹೊಂದಿದ ಸರಬರಾಜುಗಳನ್ನು ಒಳಗೊಂಡಂತೆ ಕಾಳಸಂತೆಯ ತೈಲವನ್ನು ಸಾಗಿಸಲು ಬಳಸಲಾಗುತ್ತಿದೆ ಎಂದು ಅಮೆರಿಕಾ ಹೇಳಿದ್ದು ಅಮೆರಿಕಾದ ಕರಾವಳಿ ರಕ್ಷಣಾ ಪಡೆ ಈ ನೌಕೆಯನ್ನು ಅಟ್ಲಾಂಟಿಕ್ ಸಾಗರದವರೆಗೆ ಹಿಂಬಾಲಿಸಿದ ಬಳಿಕ ವಶಕ್ಕೆ ಪಡೆದಿದೆ. ಡಿಸೆಂಬರ್ ನಲ್ಲಿ ಈ ನೌಕೆ ಅಂತರಾಷ್ಟ್ರೀಯ ಸಮುದ್ರ ಪ್ರದೇಶವನ್ನು ತಲುಪುವ ಮೊದಲು ನೌಕೆಯನ್ನು ಹತ್ತಲು ಅಮೆರಿಕಾದ ಅಧಿಕಾರಿಗಳು ಮಾಡಿದ ಪ್ರಯತ್ನವನ್ನು ಹಡಗಿನ ಸಿಬ್ಬಂದಿ ತಡೆದಿದ್ದಾರೆ. ಬಳಿಕ ತ್ವರಿತವಾಗಿ ನೌಕೆಯ ಮೇಲೆ ರಶ್ಯದ ಧ್ವಜವನ್ನು ಚಿತ್ರಿಸಲಾಗಿದ್ದು ನೌಕೆಯ ಹೆಸರನ್ನು `ಮೆರಿನೆರಾ' ಎಂದು ಮರುನಾಮಕರಣ ಮಾಡಿದರು ಮತ್ತು ಅದರ ನೋಂದಣಿಯನ್ನು ರಶ್ಯಾಕ್ಕೆ ಬದಲಾಯಿಸಿದರು ಎಂದು ಅಮೆರಿಕಾದ ಅಧಿಕಾರಿಗಳು ಹೇಳಿದ್ದಾರೆ.
ಪರಿಸ್ಥಿತಿಯನ್ನು ಕಳವಳದಿಂದ ಗಮನಿಸುತ್ತಿರುವುದಾಗಿ ರಶ್ಯದ ವಿದೇಶಾಂಗ ಇಲಾಖೆ ಹೇಳಿದೆ. ಇದು ನಾಗರಿಕ ನೌಕೆಯೊಂದಿಗೆ ಅಮೆರಿಕಾದ ಹಸ್ತಕ್ಷೇಪ ಕ್ರಮವಾಗಿದೆ ಎಂದು ರಶ್ಯದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕಾದ ಕರಾವಳಿ ಭದ್ರತಾ ಪಡೆಯ ನೌಕೆಯು ಟ್ಯಾಂಕರ್ನ ಅತೀ ಹತ್ತಿರದಿಂದ ಹಿಂಬಾಲಿಸುತ್ತಿರುವ ವೀಡಿಯೊವನ್ನು ರಶ್ಯದ ಮಾಧ್ಯಮಗಳು ಬಿಡುಗಡೆಗೊಳಿಸಿದ್ದು ʼನಾಗರಿಕ ಹಡಗು' ಎಂದು ಸ್ಪಷ್ಟವಾಗಿ ವಿವರಿಸಿದ ಹೊರತಾಗಿಯೂ ರಶ್ಯದ ಮುರ್ಮನ್ಸ್ಕ್ ಕಡೆಗೆ ಸಾಗುತ್ತಿದ್ದಾಗ ಹಡಗನ್ನು ಅಮೆರಿಕಾ ವಶಕ್ಕೆ ಪಡೆದಿದೆ ಎಂದು ಪ್ರತಿಪಾದಿಸಿದೆ.







