ಪಾಕಿಸ್ತಾನ ಸೇನಾ ವಾಹನಗಳ ಮೇಲೆ ದಾಳಿ: 7 ಸಿಬ್ಬಂದಿ ಮೃತ್ಯು

ಸಾಂದರ್ಭಿಕ ಚಿತ್ರ | Photo credit : chatgpt
ಪೇಷಾವರ : ಬಲೂಚಿಸ್ತಾನದ ಗ್ವಾದರ್ ಜಿಲ್ಲೆಯಲ್ಲಿ ಪಾಕಿಸ್ತಾನದ ಸೇನಾ ವಾಹನಗಳನ್ನು ಗುರಿಯಾಗಿಸಿಕೊಂಡು ರಿಮೋಟ್ ಕಂಟ್ರೋಲ್ ಮೂಲಕ ನಡೆಸಿದ ಸ್ಫೋಟದಲ್ಲಿ ಮೇಜರ್ ಸೇರಿದಂತೆ ಏಳು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ದಾಳಿಯ ಹೊಣೆಯನ್ನು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಹೊತ್ತುಕೊಂಡಿದೆ.
ಪಸ್ನಿಯ ಕುಬ್ರಿ ಪ್ರದೇಶದ ಶಾದಿ ಕೌರ್ ಬಳಿ ಸೇನಾ ವಾಹನಗಳ ಸಾಲನ್ನು ಗುರಿಯಾಗಿಸಿಕೊಂಡು ನಡೆಸಿದ ಸ್ಫೋಟದಲ್ಲಿ ಮೇಜರ್ ವಜಾಹತ್ ವಹೀದ್ ಸೇರಿದಂತೆ ಪಾಕಿಸ್ತಾನದ ಏಳು ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ. ದಾಳಿಗೆ ಗುರಿಯಾದ ವಾಹನ ಸಂಪೂರ್ಣವಾಗಿ ನಾಶವಾಗಿದೆ ಎಂದು ಬಿಎಲ್ಎ ಪ್ರತಿಪಾದಿಸಿದೆ.
ಐಇಡಿ ಸ್ಫೋಟದಲ್ಲಿ ಮೇಜರ್ ವಜಾಹತ್ ವಹೀದ್ ಮೃತಪಟ್ಟಿರುವುದನ್ನು ಪಾಕಿಸ್ತಾನ ಸೇನೆ ದೃಢಪಡಿಸಿದೆ. ಕಲಾತ್ ನ ಜತ್ತಕಾಬಾದ್ನಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ.




