ಹಾರ್ಮುಝ್ ಜಲಸಂಧಿಯಲ್ಲಿ ಸೂಪರ್ ಟ್ಯಾಂಕರ್ ಮೇಲೆ ದಾಳಿ: ಇರಾನ್ IRGC ಹೇಳಿಕೆ

Photo: x.com/clashreport
ಟೆಹ್ರಾನ್: ಹಾರ್ಮುಝ್ ಜಲಸಂಧಿಯಲ್ಲಿ ಸೂಪರ್ ಟ್ಯಾಂಕರ್ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸೋಮವಾರ ಹೇಳಿದೆ ಎಂದು Aljazeera ವರದಿ ಮಾಡಿದೆ.
ಇಂಧನ ಪೂರೈಕೆಗೆ ನಿರ್ಣಾಯಕವಾಗಿರುವ ಹಾರ್ಮುಝ್ ಜಲಸಂಧಿಯಲ್ಲಿ ‘ಅನಧಿಕೃತ ಮಾರ್ಗ’ ಬಳಸಿ ಸಾಗಲು ಯತ್ನಿಸಿದ ಹಡಗನ್ನು ಗುರಿಯಾಗಿಸಿಕೊಂಡಿರುವುದಾಗಿ ಐಆರ್ಜಿಸಿಯ ನೌಕಾಪಡೆ ತಿಳಿಸಿದೆ. ತನ್ನ ಸೆಪಾ ನ್ಯೂಸ್ ಪ್ರಕಟಿಸಿದ ಹೇಳಿಕೆಯಲ್ಲಿ, ಹಡಗಿಗೆ ಢಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ ಎಂದು ಉಲ್ಲೇಖಿಸಿದೆ.
ಹಡಗು ತನ್ನ ಟ್ರಾನ್ಸ್ಪಾಂಡರ್ ಗಳನ್ನು ನಿಷ್ಕ್ರಿಯಗೊಳಿಸಿ, ನೌಕಾಪಡೆಯ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಜಲಸಂಧಿಯನ್ನು ದಾಟಲು ಪ್ರಯತ್ನಿಸಿತ್ತು ಎಂದು ಐಆರ್ಜಿಸಿ ಆರೋಪಿಸಿದೆ.
ಜಲಸಂಧಿಯನ್ನು ದಾಟುವಾಗ ಪತ್ತೆಹಚ್ಚುವುದನ್ನು ತಪ್ಪಿಸಲು ಟ್ರಾನ್ಸ್ಪಾಂಡರ್ ನಿಷ್ಕ್ರಿಯಗೊಳಿಸುವ ಹಡಗುಗಳನ್ನು ‘ಪ್ರತಿಕೂಲ’ ಎಂದು ಪರಿಗಣಿಸಲಾಗುವುದು ಮತ್ತು ಅವು ತೀವ್ರ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಎಂದು ಐಆರ್ಜಿಸಿ ನೌಕಾಪಡೆಯ ಕಮಾಂಡರ್ ಅಲಿ ಓಜ್ಮೈ ಕಳೆದ ವಾರಾಂತ್ಯದಲ್ಲಿ ಎಚ್ಚರಿಕೆ ನೀಡಿದ್ದರು.
ಇದೇ ವೇಳೆ, ಬ್ರಿಟನ್ ನ ಕಡಲ ಭದ್ರತಾ ಸಂಸ್ಥೆ ಯುಕೆಎಂಟಿಒ ಸೋಮವಾರ ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳು ಢಿಕ್ಕಿ ಹೊಡೆದ ನಾಲ್ಕು ಪ್ರತ್ಯೇಕ ಘಟನೆಗಳನ್ನು ವರದಿ ಮಾಡಿದೆ.






