ಕದನ ವಿರಾಮದ ನಡುವೆಯೇ ಮುಂದುವರಿದ ದಾಳಿ | ಇರಾನ್ ತೈಲ ಘಟಕಕ್ಕೂ ಹಾನಿ; ಯುಎಇ, ಕುವೈತ್, ಬಹ್ರೇನ್ ಮೇಲೂ ದಾಳಿ

Photo credit: AFP
ಟೆಹ್ರಾನ್/ವಾಷಿಂಗ್ಟನ್: ಅಮೆರಿಕ–ಇರಾನ್ ನಡುವೆ ಘೋಷಿಸಲಾದ ಎರಡು ವಾರಗಳ ಕದನ ವಿರಾಮದ ನಡುವೆಯೇ ಮಧ್ಯಪ್ರಾಚ್ಯದಲ್ಲಿ ಬುಧವಾರವೂ ದಾಳಿಗಳು ಮುಂದುವರಿದಿವೆ. ಇದರಿಂದ ಕದನ ವಿರಾಮದ ಎಷ್ಟು ದಿನ ಇರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ.
ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಕುವೈತ್, ಬಹ್ರೇನ್ ಹಾಗೂ ಲೆಬನಾನ್ ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇರಾನ್ ನ ತೈಲ ಸಂಸ್ಕರಣಾ ಮೂಲಸೌಕರ್ಯಕ್ಕೂ ಹಾನಿಯಾಗಿರುವ ಕುರಿತು ವರದಿಯಾಗಿದೆ.
ಯುಎಇ, ಕುವೈತ್ ಮತ್ತು ಬಹ್ರೇನ್ ದೇಶಗಳು ಇರಾನ್ ಮೂಲದ ಕ್ಷಿಪಣಿಗಳು ಹಾಗೂ ಡ್ರೋನ್ ದಾಳಿಗೆ ಗುರಿಯಾಗಿವೆ. ಇದರಿಂದಾಗಿ ಈ ದೇಶಗಳು ತಮ್ಮ ವಾಯು ರಕ್ಷಣಾ ವ್ಯವಸ್ಥೆಗಳನ್ನು ತಕ್ಷಣ ಸಕ್ರಿಯಗೊಳಿಸಿವೆ.
ಯುದ್ಧ ವಿರಾಮಕ್ಕೆ ಒಪ್ಪಂದವಾದ ಕೆಲವೇ ಗಂಟೆಗಳಲ್ಲೇ ಈ ದಾಳಿಗಳು ನಡೆದಿದೆ ಎಂದು ತಿಳಿದು ಬಂದಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಈ ಕದನ ವಿರಾಮ ಮಾಡಲಾಗಿದ್ದು, ಆರು ವಾರಗಳ ಸಂಘರ್ಷಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಯುಎಇ ರಕ್ಷಣಾ ಇಲಾಖೆಯ ಪ್ರಕಾರ, ವಾಯು ರಕ್ಷಣಾ ಪಡೆಗಳು ಇರಾನ್ ನಿಂದ ಬರುವ ಕ್ಷಿಪಣಿಗಳು ಮತ್ತು ಡ್ರೋನ್ ಗಳನ್ನು ತಡೆಯಲು ಕಾರ್ಯನಿರ್ವಹಿಸುತ್ತಿವೆ. ಬ್ಯಾಲಿಸ್ಟಿಕ್ ಹಾಗೂ ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸುವ ವೇಳೆ ಅನೇಕ ಸ್ಥಳಗಳಲ್ಲಿ ಸ್ಫೋಟಗಳು ಕೇಳಿಬಂದಿವೆ.
ಇದೇ ವೇಳೆ ಲೆಬನಾನ್ ನಲ್ಲಿ ಇಸ್ರೇಲ್ ದಾಳಿಗಳು ತೀವ್ರಗೊಂಡಿವೆ.







