ಹಿಜ್ಬುಲ್ಲಾ ನಿಶಸ್ತ್ರೀಕರಣ ಒಪ್ಪಂದ ಪಾಲಿಸದಿದ್ದರೆ ದಾಳಿ ಹೆಚ್ಚಳ; ಲೆಬನಾನ್ ಗೆ ಇಸ್ರೇಲ್ ಎಚ್ಚರಿಕೆ

ಸಾಂದರ್ಭಿಕ ಚಿತ್ರ | Photo Credit : aljazeera.com
ಟೆಲ್ ಅವೀವ್, ನ.2: ಇಸ್ರೇಲ್ ಮತ್ತು ಲೆಬನಾನಿನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಹಿಜ್ಬುಲ್ಲಾ ಬೆಂಕಿಯೊಂದಿಗೆ ಆಟವಾಡುತ್ತಿದೆ ಎಂದು ಇಸ್ರೇಲ್ ರವಿವಾರ ಆರೋಪಿಸಿದ್ದು, ಕದನ ವಿರಾಮದ ಒಪ್ಪಂದದ ಪ್ರಕಾರ ಹಿಜ್ಬುಲ್ಲಾವನ್ನು ನಿಶ್ಯಸ್ತ್ರೀಕರಣಗೊಳಿಸುವ ಪ್ರಕ್ರಿಯೆಯನ್ನು ವೇಗಗೊಳಿಸಿ ಅದನ್ನು ದೇಶದ ದಕ್ಷಿಣ ಭಾಗದಿಂದ ತೆರವುಗೊಳಿಸುವಂತೆ ಲೆಬನಾನ್ ಸರಕಾರವನ್ನು ಆಗ್ರಹಿಸಿದೆ.
ಗರಿಷ್ಠ ಮಟ್ಟದ ಪ್ರತಿಕ್ರಿಯೆ ಮುಂದುವರಿಯಲಿದೆ ಮತ್ತು ಇನ್ನಷ್ಟು ತೀವ್ರಗೊಳ್ಳಲಿದೆ. ನಾವು ನಿವಾಸಿಗಳ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದು ಯಾವುದೇ ಬೆದರಿಕೆಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಹಿಜ್ಬುಲ್ಲಾ ಶಸ್ತ್ರಾಸ್ತ್ರ ತ್ಯಜಿಸಲು ನಿರಾಕರಿಸಿದರೆ ದಕ್ಷಿಣ ಲೆಬನಾನ್ ಮೇಲೆ ವ್ಯಾಪಕ ವೈಮಾನಿಕ ದಾಳಿ ನಡೆಸುವುದಾಗಿ ಇಸ್ರೇಲ್ ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಲೆಬನಾನ್ ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ದಕ್ಷಿಣ ಲೆಬನಾನಿನಲ್ಲಿ ಶನಿವಾರ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ 4 ಮಂದಿ ಸಾವನ್ನಪ್ಪಿರುವುದಾಗಿ ಲೆಬನಾನಿನ ಆರೋಗ್ಯ ಇಲಾಖೆ ಹೇಳಿದೆ. ಇಸ್ರೇಲ್ ದಾಳಿಗಳನ್ನು ತೀವ್ರಗೊಳಿಸಿರುವುದು ಸುಮಾರು 1 ವರ್ಷದಿಂದ ಜಾರಿಯಲ್ಲಿರುವ ಕದನ ವಿರಾಮದ ಮೇಲೆ ಪರಿಣಾಮ ಬೀರುವ ಭೀತಿ ಎದುರಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ರವಿವಾರ ವರದಿ ಮಾಡಿದೆ.
2024ರ ನವೆಂಬರ್ ನಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕವೂ ದಕ್ಷಿಣ ಲೆಬನಾನಿನ ಐದು ಪ್ರದೇಶಗಳಲ್ಲಿ ಇಸ್ರೇಲ್ ತನ್ನ ಪಡೆಗಳನ್ನು ಉಳಿಸಿಕೊಂಡಿದ್ದು ಹಿಜ್ಬುಲ್ಲಾಗಳನ್ನು ಗುರಿಯಾಗಿಸಿ ಲೆಬನಾನಿನಲ್ಲಿ ದಾಳಿ ಮುಂದುವರಿಸಿದೆ.







