ಆಸ್ಟ್ರೇಲಿಯ ನಾಯಕಿ ಹೀಲಿ ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ

ಅಲಿಸಾ ಹೀಲಿ | Photo Credit : PTI
ಮೆಲ್ಬರ್ನ್, ಜ.13: ಸ್ವದೇಶದಲ್ಲಿ ಭಾರತ ವಿರುದ್ಧ ನಡೆಯಲಿರುವ ಸರಣಿಯ ನಂತರ ಮಾರ್ಚ್ ನಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳುವುದಾಗಿ ಆಸ್ಟ್ರೇಲಿಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಅಲಿಸಾ ಹೀಲಿ ಮಂಗಳವಾರ ಘೋಷಿಸಿದ್ದಾರೆ.
35 ವರ್ಷದ ವಿಕೆಟ್ ಕೀಪರ್-ಬ್ಯಾಟರ್ ಹೀಲಿ 15 ವರ್ಷಗಳ ಕಾಲ ಆಸ್ಟ್ರೇಲಿಯ ಪರ ಆಡಿದ್ದಾರೆ. ಎಲ್ಲ ಮಾದರಿಗಳಲ್ಲಿ ಸುಮಾರು 300 ಪಂದ್ಯಗಳನ್ನು ಆಡಿರುವ ಅವರು 7,000ಕ್ಕೂ ಅಧಿಕ ರನ್ ಗಳಿಸಿ 275 ವಿಕೆಟ್ಗಳನ್ನು ಪಡೆದಿದ್ದಾರೆ.
“ಭಾರತ ವಿರುದ್ಧದ ಮುಂಬರುವ ಸರಣಿಯೇ ಆಸ್ಟ್ರೇಲಿಯ ಪರ ನನ್ನ ಕೊನೆಯ ಸರಣಿ. ಇನ್ನೂ ತಂಡದ ಪರ ಆಡಬೇಕೆಂಬ ಉತ್ಸಾಹ ಇದೆ. ನನ್ನ ದೇಶವನ್ನು ಪ್ರತಿನಿಧಿಸಿರುವುದು ಅಪಾರ ಗೌರವ,” ಎಂದು ಹೀಲಿ ಹೇಳಿದ್ದಾರೆ.
2023ರಲ್ಲಿ ಮೆಗ್ ಲ್ಯಾನ್ನಿಂಗ್ ಅವರಿಂದ ಪೂರ್ಣಕಾಲಿಕ ನಾಯಕತ್ವವನ್ನು ವಹಿಸಿಕೊಂಡ ಹೀಲಿ, ಇಂಗ್ಲೆಂಡ್ ವಿರುದ್ಧ ಐತಿಹಾಸಿಕ 16–0 ವೈಟ್ವಾಶ್ಗೆ ನಾಯಕತ್ವ ವಹಿಸಿದ್ದರು.
ಆಕ್ರಮಣಕಾರಿ ಬ್ಯಾಟರ್ ಹಾಗೂ ನಿಪುಣ ವಿಕೆಟ್ಕೀಪರ್ ಆಗಿರುವ ಹೀಲಿ ಎಂಟು ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಫೆಬ್ರವರಿ–ಮಾರ್ಚ್ನಲ್ಲಿ ಭಾರತ ವಿರುದ್ಧ ನಡೆಯುವ ಸರಣಿಯಲ್ಲಿ ಮೂರು ಟಿ-20, ಎರಡು ಏಕದಿನ ಹಾಗೂ ಒಂದು ಟೆಸ್ಟ್ ಪಂದ್ಯ ನಡೆಯಲಿದ್ದು, ಹೀಲಿ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಆಡಲಿದ್ದಾರೆ.







