ಫೆಲೆಸ್ತೀನ್ ರಾಷ್ಟ್ರ ಗುರುತಿಸಲು ಆಸ್ಟ್ರೇಲಿಯಾ ನಿರ್ಧಾರ

ಸಾಂದರ್ಭಿಕ ಚಿತ್ರ (credit: AFP)
ಸಿಡ್ನಿ, ಆ.11: ಸೆಪ್ಟಂಬರ್ ನಲ್ಲಿ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಫೆಲೆಸ್ತೀನ್ ರಾಷ್ಟ್ರವನ್ನು ಆಸ್ಟ್ರೇಲಿಯಾ ಅಧಿಕೃತವಾಗಿ ಗುರುತಿಸಲಿದೆ ಎಂದು ಪ್ರಧಾನಿ ಅಂತೋನಿ ಅಲ್ಬಾನೀಸ್ ಸೋಮವಾರ ಹೇಳಿದ್ದಾರೆ.
ಫೆಲೆಸ್ತೀನ್ ಸರಕಾರದಲ್ಲಿ ಹಮಾಸ್ಗೆ ಯಾವುದೇ ಪಾತ್ರ ಇರಬಾರದು, ಗಾಝಾವನ್ನು ಸೈನ್ಯ ರಹಿತ ಪ್ರದೇಶವನ್ನಾಗಿಸಬೇಕು ಮತ್ತು ಚುನಾವಣೆ ನಡೆಸಬೇಕು ಎಂಬ ಷರತ್ತಿನ ಮೇರೆಗೆ ಫೆಲೆಸ್ತೀನ್ ರಾಷ್ಟ್ರವನ್ನು ಗುರುತಿಸಲು ನಿರ್ಧರಿಸಲಾಗಿದೆ ಎಂದು ಅವರು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಫೆಲೆಸ್ತೀನಿಯನ್ ಪ್ರಾಧಿಕಾರ(ಪಿಎ)ದಿಂದ ಆಸ್ಟ್ರೇಲಿಯಾ ಪಡೆದ ಬದ್ಧತೆಗಳನ್ನು ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಮಧ್ಯ ಪ್ರಾಚ್ಯದಲ್ಲಿ ಹಿಂಸಾಚಾರದ ಆವರ್ತವನ್ನು ಮುರಿಯುವುದು ಮತ್ತು ಸಂಘರ್ಷವನ್ನು ಕೊನೆಗೊಳಿಸುವುದು, ಗಾಝಾದಲ್ಲಿನ ಸಂಕಷ್ಟವನ್ನು ಅಂತ್ಯಗೊಳಿಸುವುದಕ್ಕೆ ಜಾಗತಿಕ ಸಮುದಾಯ ಆದ್ಯತೆ ನೀಡುತ್ತಿದೆ ಎಂದವರು ಹೇಳಿದ್ದಾರೆ. ಗಾಝಾದಲ್ಲಿ ಮಿಲಿಟರಿ ಆಕ್ರಮಣವನ್ನು ತೀವ್ರಗೊಳಿಸುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಯೋಜನೆಯನ್ನು ಆಸ್ಟ್ರೇಲಿಯಾ ಸರಕಾರ ಟೀಕಿಸಿದೆ. ಫ್ರಾನ್ಸ್, ಕೆನಡಾ ಮತ್ತು ಬ್ರಿಟನ್ ಈಗಾಗಲೇ ಫೆಲೆಸ್ತೀನ್ ರಾಷ್ಟ್ರವನ್ನು ಗುರುತಿಸುವುದಾಗಿ ಘೋಷಿಸಿವೆ.





