ಆಸ್ಟ್ರೇಲಿಯಾ: 16 ವರ್ಷದೊಳಗಿನವರ ಸಾಮಾಜಿಕ ಜಾಲತಾಣ ಬಳಕೆ ತಡೆಯುವ ಪ್ರಯತ್ನ ವಿಫಲ; ಅಧ್ಯಯನ ವರದಿ

ಸಾಂದರ್ಭಿಕ ಚಿತ್ರ Photo: magnific
ಕ್ಯಾನ್ಬೆರಾ: 16 ವರ್ಷದೊಳಗಿನ ಮಕ್ಕಳಿಗೆ ಸರ್ಕಾರ ನಿಷೇಧ ಹೇರಿದ್ದರೂ ಸಹ, ಆಸ್ಟ್ರೇಲಿಯಾದ 10ರಲ್ಲಿ 8ಕ್ಕೂ ಹೆಚ್ಚು ಯುವಕರು ಮತ್ತು ಹದಿಹರೆಯದವರು ಸಾಮಾಜಿಕ ಜಾಲತಾಣ ವೇದಿಕೆಗಳನ್ನು ಬಳಸುವುದನ್ನು ಮುಂದುವರಿಸಿದ್ದಾರೆ ಎಂದು ಆಸ್ಟ್ರೇಲಿಯಾದ ಇಂಟರ್ನೆಟ್ ನಿಯಂತ್ರಕ ಸಂಸ್ಥೆ ಇ-ಸೇಫ್ಟಿಯ ಹೊಸ ಅಧ್ಯಯನ ವರದಿಯು ಬಹಿರಂಗಪಡಿಸಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಈ ನಿಷೇಧ ಜಾರಿಗೆ ಬಂದಿತ್ತು.
10 ರಿಂದ 15 ವರ್ಷದೊಳಗಿನ ಹೆಚ್ಚಿನ ಮಕ್ಕಳು ನಿಷೇಧಕ್ಕೂ ಮುನ್ನ ಇದ್ದಷ್ಟೇ ಪ್ರಮಾಣದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿದ್ದಾರೆ ಎಂದು ಮಾರ್ಚ್ ತಿಂಗಳ ಅಂಕಿಅಂಶಗಳು ಸಾಬೀತುಪಡಿಸಿವೆ.
"ನಿಷೇಧ ಆರಂಭಕ್ಕೂ ಮುನ್ನ ಸಾಮಾಜಿಕ ಜಾಲತಾಣ ಖಾತೆಗಳನ್ನು ಹೊಂದಿದ್ದ 16 ವರ್ಷದೊಳಗಿನವರಲ್ಲಿ ಹೆಚ್ಚಿನವರು ಮೂರು ತಿಂಗಳ ನಂತರವೂ ಅವುಗಳನ್ನು ಉಳಿಸಿಕೊಳ್ಳಲು ಅಥವಾ ಹೊಸ ಖಾತೆಗಳನ್ನು ತೆರೆಯಲು ಸಮರ್ಥರಾಗಿದ್ದಾರೆ. ಸಾಮಾಜಿಕ ಜಾಲತಾಣ ಸಂಸ್ಥೆಗಳು ವಯಸ್ಸನ್ನು ಖಚಿತಪಡಿಸಿಕೊಳ್ಳುವ ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿರುವುದೇ ಇದಕ್ಕೆ ಪ್ರಮುಖ ಕಾರಣ," ಎಂದು ಇ-ಸೇಫ್ಟಿ ತನ್ನ ವರದಿಯಲ್ಲಿ ತಿಳಿಸಿದೆ.
ತಮ್ಮ ಖಾತೆಗಳನ್ನು ಉಳಿಸಿಕೊಂಡಿರುವ ಅರ್ಧದಷ್ಟು ಮಕ್ಕಳು ‘ಸಾಮಾಜಿಕ ಜಾಲತಾಣ ಪ್ಲಾಟ್ಫಾರ್ಮ್ಗಳು ತಮ್ಮ ವಯಸ್ಸನ್ನು ಪರಿಶೀಲಿಸಿಲ್ಲ’ ಎಂದು ಹೇಳಿದ್ದಾರೆ. ಇತರರು ತಮ್ಮ ಖಾತೆಗಳು ತಮ್ಮನ್ನು 16 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಎಂದು ನಮೂದಿಸಿವೆ ಅಥವಾ ವಯಸ್ಸನ್ನು ಪರಿಶೀಲಿಸುವ ವ್ಯವಸ್ಥೆಗಳು ತಾವು ದೊಡ್ಡವರು ಎಂದು ತಪ್ಪಾಗಿ ನಿರ್ಧರಿಸಿವೆ ಎಂದು ಹೇಳಿದ್ದಾರೆ.
ನಿಷೇಧಕ್ಕೂ ಮುನ್ನ ಸಮೀಕ್ಷೆ ನಡೆಸಿದ ಶೇ. 86ರಷ್ಟು ಮಕ್ಕಳು ಕನಿಷ್ಠ ಒಂದು ವಯೋಮಿತಿ ನಿರ್ಬಂಧಿತ ವೇದಿಕೆಯನ್ನು ಬಳಸುತ್ತಿರುವುದಾಗಿ ವರದಿ ಮಾಡಿದ್ದರು. ಮೂರು ತಿಂಗಳ ಬಳಿಕವೂ, ಆ ಸಂಖ್ಯೆ ಶೇ. 81ಕ್ಕಿಂತ ಹೆಚ್ಚೇ ಉಳಿದಿದೆ ಎಂದು ಇ-ಸೇಫ್ಟಿ ವರದಿ ಹೇಳಿದೆ.
ಸುಮಾರು ಶೇ. 58ರಷ್ಟು ಹದಿಹರೆಯದವರು ಪ್ರತಿದಿನ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ನಿಷೇಧಕ್ಕೂ ಮುನ್ನ ಈ ಸಂಖ್ಯೆ ಸುಮಾರು ಶೇ. 60ರಷ್ಟಿತ್ತು.
ಆದರೂ, ಕ್ರೀಡೆ ಮತ್ತು ದೈಹಿಕ ಚಟುವಟಿಕೆ, ಕಲೆ ಮತ್ತು ಸಂಗೀತ, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವುದು ಮತ್ತು ಸಮುದಾಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಯಲ್ಲಿ ಕನಿಷ್ಠ ಬದಲಾವಣೆಯಾಗಿದೆ ಎಂದು ವರದಿ ತೋರಿಸಿದೆ.
ಹೊಸ ನಿಯಮವನ್ನು ಪರಿಚಯಿಸಿದಾಗ, ಅದನ್ನು ಜಾರಿಗೊಳಿಸುವುದು ತುಂಬಾ ಕಷ್ಟಕರವಾಗಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದರು.
ಈ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಸಹಾಯಕ ಸಚಿವ ಆಂಡ್ರ್ಯೂ ಲೀ, ಸಾಮಾಜಿಕ ಜಾಲತಾಣ ನಿಷೇಧವು ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಯ ಬಗ್ಗೆ ರಾಷ್ಟ್ರೀಯ ಚರ್ಚೆಯನ್ನು ಈಗಾಗಲೇ ಮರುರೂಪಿಸಿದೆ ಎಂದು ವಾದಿಸಿದರು.
“ಇದು ಪೋಷಕರ ನಡುವಿನ ಸಂಭಾಷಣೆಯಲ್ಲಿ ಪ್ರಮುಖ ಬದಲಾವಣೆ ತಂದಿದೆ. ನಾವು ಲಕ್ಷಾಂತರ ಖಾತೆಗಳನ್ನು ಮುಚ್ಚಿದ್ದೇವೆ. ಇದರಿಂದ ಶೇ. 100ರಷ್ಟು ಗುರಿಸಾಧನೆಯನ್ನು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ. ಮದ್ಯಪಾನದ ಕನಿಷ್ಠ ವಯಸ್ಸಿನ ಕಾನೂನುಗಳಿಂದಲೂ ನಾವು 100% ಪಾಲನೆಯನ್ನು ಪಡೆಯುವುದಿಲ್ಲ, ಆದರೂ ಆ ಕಾನೂನು ಪುಸ್ತಕಗಳಲ್ಲಿ ಇರುವುದು ಸೂಕ್ತವಾಗಿದೆ," ಎಂದು ಅವರು ಹೇಳಿದರು.
ಡಿಸೆಂಬರ್ 2025ರಲ್ಲಿ, ಆಸ್ಟ್ರೇಲಿಯಾ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ವೇದಿಕೆಗಳನ್ನು ಬಳಸುವುದನ್ನು ನಿಷೇಧಿಸಿತು ಮತ್ತು ಈ ಮೂಲಕ ಮಕ್ಕಳಿಗೆ ಸಾಮಾಜಿಕ ಜಾಲತಾಣ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ವಿಡಿಯೋ ಗೇಮ್ ಪ್ಲಾಟ್ಫಾರ್ಮ್ಗಳನ್ನು ಈ ನಿಷೇಧದಲ್ಲಿ ಸೇರಿಸಲಾಗಿಲ್ಲ.






