ಆಸ್ಟ್ರೇಲಿಯಾ ಸಂಸತ್ ನಲ್ಲಿ ಸ್ಥಳೀಯರಿಗೆ ಹೆಚ್ಚಿನ ಪ್ರಾತಿನಿಧ್ಯ ಪ್ರಸ್ತಾವನೆಗೆ ಹಿನ್ನಡೆ

Photo: PTI
ಸಿಡ್ನಿ: ಸ್ಥಳ ಜನ್ಯ(ಸ್ಥಾನಿಕ) ಆಸ್ಟ್ರೇಲಿಯನ್ನರಿಗೆ ಸಂಸತ್ ನಲ್ಲಿ ಪ್ರಾತಿನಿಧ್ಯ ಒದಗಿಸುವ ಮತ್ತು ಸಂಸತ್ತಿಗೆ ಸ್ಥಳೀಯ ಸಲಹಾ ಸಮಿತಿ ಸ್ಥಾಪಿಸುವ ಪ್ರಸ್ತಾವನೆಗೆ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಹಿನ್ನಡೆಯಾಗಿದೆ ಎಂದು ‘ಆಸ್ಟ್ರೇಲಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಶನ್’ ವರದಿ ಮಾಡಿದೆ.
ಸ್ಥಳೀಯರಿಗೆ ಸಂಸತ್ ನಲ್ಲಿ ಧ್ವನಿ ಒದಗಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಶನಿವಾರದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ 17.6 ದಶಲಕ್ಷ ಜನತೆ ತಮ್ಮ ಅಭಿಪ್ರಾಯ ತಿಳಿಸಿದ್ದು 20%ದಷ್ಟು ಮತಗಣನೆಯ ಬಳಿಕ ‘ಬೇಡ’ ಎನ್ನುವವರ ಪ್ರಮಾಣ ಗರಿಷ್ಟ ಮಟ್ಟದಲ್ಲಿದೆ ಎಂದು ವರದಿ ಹೇಳಿದೆ. ಆಸ್ಟ್ರೇಲಿಯಾದ ಸಂವಿಧಾನದಲ್ಲಿ ಬದಲಾವಣೆ ಮಾಡಲು 6 ರಾಜ್ಯಗಳ ಪೈಕಿ ಕನಿಷ್ಟ 4 ರಾಜ್ಯಗಳ ಬೆಂಬಲದ ಅಗತ್ಯವಿದೆ. ಆದರೆ ನ್ಯೂಸೌತ್ ವೇಲ್ಸ್, ತಾಸ್ಮಾನಿಯಾ ಮತ್ತು ದಕ್ಷಿಣ ಆಸ್ಟ್ರೇಲಿಯಾ ರಾಜ್ಯಗಳ ಮತದಾರರು ಪ್ರಸ್ತಾವನೆಯನ್ನು ವಿರೋಧಿಸಿರುವ ಸೂಚನೆ ಶನಿವಾರದ ಮತಗಣನೆಯಲ್ಲಿ ಸ್ಪಷ್ಟವಾಗಿದೆ ಎಂದು ಮೂಲಗಳು ಹೇಳಿವೆ.
ಈ ಫಲಿತಾಂಶವು ಸ್ಥಳೀಯ ಆಸ್ಟ್ರೇಲಿಯನ್ನರೊಂದಿಗೆ ಸಮನ್ವಯದ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ ಮತ್ತು ಕಳೆದ 18 ತಿಂಗಳಿಂದ ಅಧಿಕಾರದಲ್ಲಿರುವ ಲೇಬರ್ ಪಕ್ಷದ ಸರಕಾರಕ್ಕೆ ರಾಜಕೀಯ ಪ್ರಹಾರವಾಗಿದೆ. ಜನಾಭಿಪ್ರಾಯ ಸಂಗ್ರಹವು ಆಸ್ಟ್ರೇಲಿಯನ್ನರನ್ನು ಏಕತೆಯ ಧ್ವನಿಯಲ್ಲಿ ಒಂದುಗೂಡಿಸುತ್ತದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬಾನೀಸ್ ಆಶಿಸಿದ್ದರು, ಆದರೆ ಅದು ವಿಭಜನೆಯನ್ನು ಬಹಿರಂಗಪಡಿಸಿದೆ ಮತ್ತು ವರ್ಣಭೇದ ನೀತಿಯ ಆರೋಪಗಳನ್ನು ಮುಂದಿರಿಸಿದೆ. 2017ರಲ್ಲಿ ಸ್ಥಳಜನ್ಯರ ಮುಖಂಡರು ಮುಂದಿರಿಸಿದ್ದ ಪ್ರಸ್ತಾವನೆಯಂತೆ ಮೂಲನಿವಾಸಿಗಳು ಹಾಗೂ ಟೊರೆಸ್ ಜಲಸಂಧಿಯ ನಿವಾಸಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಒದಗಿಸುವ ಜನಾಭಿಪ್ರಾಯ ಸಂಗ್ರಹಣೆಗೆ ಅಲ್ಬಾನೀಸ್ ಚಾಲನೆ ನೀಡಿದ್ದರು.







