ಆಸ್ಟ್ರೇಲಿಯನ್ ಸಾಹಿತಿ ಹೆಂಗ್ಜುನ್ಗೆ ಅಮಾನತುಗೊಂಡ ಮರಣದಂಡನೆ ಶಿಕ್ಷೆ

ಯಾಂಗ್ ಹೆಂಗ್ಜುನ್ | Photo:NDTV
ಬೀಜಿಂಗ್: ಆಸ್ಟ್ರೇಲಿಯಾದ ಸಾಹಿತಿ ಯಾಂಗ್ ಹೆಂಗ್ಜುನ್ಗೆ ಚೀನಾದ ನ್ಯಾಯಾಲಯವೊಂದು ಸೋಮವಾರ ಅಮಾನತುಗೊಂಡ ಮರಣದಂಡನೆ ಶಿಕ್ಷೆ ವಿಧಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಚೀನಾ ಮೂಲದ ಆಸ್ಟ್ರೇಲಿಯನ್ ಪ್ರಜೆ ಹೆಂಗ್ಜುನ್ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದು ಪ್ರಜಾಪ್ರಭುತ್ವ ಪರ ಬ್ಲಾಗ್ ಬರಹದಿಂದ ಗುರುತಿಸಿಕೊಂಡಿದ್ದಾರೆ. ಚೀನಾದಲ್ಲಿ ನೆಲೆಸಿ ಅನ್ಯದೇಶಗಳ ಪರ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಇವರನ್ನು 2019ರಲ್ಲಿ ಚೀನಾದ ಗ್ವಾಂಗ್ಝೌ ವಿಮಾನ ನಿಲ್ದಾಣದಲ್ಲಿ ಬ್ಬಂಧಿಸಲಾಗಿತ್ತು.
2021ರಲ್ಲಿ ಇವರ ವಿರುದ್ಧ ವಿಚಾರಣೆ ಆರಂಭಗೊಂಡಿದ್ದು ಸೋಮವಾರ ಅಮಾನತುಗೊಂಡ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ(ಶಿಕ್ಷೆ ಘೋಷಣೆಯಾದ ಬಳಿಕ 2 ವರ್ಷ ಮರಣದಂಡನೆಯನ್ನು ಅಮಾನತಿನಲ್ಲಿರಿಸುವುದು. ಈ ಅವಧಿಯಲ್ಲಿ ಆರೋಪಿ ಸನ್ನಡತೆ ತೋರಿದರೆ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವುದು).
ಹೆಂಗ್ಜುನ್ ನಿರ್ದೋಷಿಯಾಗಿದ್ದು ಅವರನ್ನು ವೈದ್ಯಕೀಯ ಪೆರೋಲ್ ಮೇಲೆ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಅವರ ಕುಟುಂಬ ಸದಸ್ಯರು ಆಸ್ಟ್ರೇಲಿಯಾ ಸರಕಾರವನ್ನು ಆಗ್ರಹಿಸಿದ್ದಾರೆ.





