ಇರಾನ್ನಲ್ಲಿ ಆಯತೊಲ್ಲಾ ಅಲಿ ಖಾಮಿನೈ ಅಂತ್ಯಕ್ರಿಯೆ : `ಅಮೆರಿಕ, ಇಸ್ರೇಲ್ಗೆ ವಿನಾಶ' ಘೋಷಣೆ ಮೊಳಗಿಸಿದ ಜನಸಮೂಹ

Photo Credit : AP , PTI
ಟೆಹರಾನ್, ಜು.4: ಹತ್ಯೆಗೀಡಾದ ಇರಾನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಆಲಿ ಖಾಮಿನೈ ಅವರಿಗೆ ಕಣ್ಣೀರಿನ ವಿದಾಯ ಹೇಳಲು ಇರಾನ್ ಸಜ್ಜಾಗುತ್ತಿದ್ದಂತೆ, ಟೆಹರಾನ್ನ ಗ್ರಾಂಡ್ ಮೊಸಲ್ಲಾದಲ್ಲಿ ಜಮಾಯಿಸಿದ ಸಾವಿರಾರು ಶೋಕತಪ್ತರು ಸೇಡಿಗೆ ಕರೆ ನೀಡುತ್ತಾ `ಅಮೆರಿಕಕ್ಕೆ ವಿನಾಶ' ಮತ್ತು `ಇಸ್ರೇಲ್ಗೆ ವಿನಾಶ' ಎಂದು ಘೋಷಣೆಗಳನ್ನು ಕೂಗಿದರು.
ಆಯತೊಲ್ಲಾ ಆಲಿ ಖಾಮಿನೈ ಅವರ ಆರು ದಿನಗಳ ಸಾರ್ವಜನಿಕ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಇರಾನ್ ಅಧಿಕೃತವಾಗಿ ಪ್ರಾರಂಭಿಸಿದೆ. ಖಾಮಿನೈ ಅವರ ದಫನ ಕಾರ್ಯಕ್ಕೂ ಮುನ್ನ ಈ ಮೆರವಣಿಗೆಗಳು ಇರಾಕ್ನಲ್ಲೂ ಮುಂದುವರೆಯಲಿವೆ.
ಇಮಾಮ್ ಖಾಮಿನೈ ಮೊಸಲ್ಲಾದಲ್ಲಿ ಜಮಾಯಿಸಿದ ಶೋಕತಪ್ತರು ಸೇಡಿನ ಸಂಕೇತವಾದ ಕೆಂಪು ಬ್ಯಾನರ್ಗಳನ್ನು ಹಿಡಿದು "ಅಮೆರಿಕಕ್ಕೆ ವಿನಾಶ' ಮತ್ತು `ಸೇಡು, ಸೇಡು' ಎಂದು ಘೋಷಣೆಗಳನ್ನು ಕೂಗಿದರು ಎಂದು ಎಎಫ್ಪಿ ವರದಿ ಮಾಡಿದೆ. 1989 ರಲ್ಲಿ ನಡೆದ ಆಯತೊಲ್ಲಾ ರುಹೊಲ್ಲಾ ಖಾಮಿನೈ ಅವರ ಅಂತ್ಯಕ್ರಿಯೆಯ ನಂತರ ಇರಾನ್ನಲ್ಲಿ ನಡೆದ ಅತಿ ದೊಡ್ಡ ಸಾರ್ವಜನಿಕ ಸಭೆ ಇದಾಗಿದೆ.
1989ರಲ್ಲಿ ಆಯತೊಲ್ಲಾ ರುಹೊಲ್ಲಾ ಖಾಮಿನೈ ಅವರ ನಿಧನದ ನಂತರ ಇರಾನ್ನ ಸರ್ವೋಚ್ಚ ನಾಯಕರಾಗಿದ್ದ ಖಾಮಿನೈ ಅವರಿಗೆ ಈ ಅಂತ್ಯಕ್ರಿಯೆಯು ಒಂದು ವಾರದ ಸುದೀರ್ಘ ವಿದಾಯವನ್ನು ಸೂಚಿಸುತ್ತದೆ. ಖಾಮಿನೈ ಅವರ ಪಾರ್ಥಿವ ಶರೀರವನ್ನು ಹೊತ್ತ ಶವಪೆಟ್ಟಿಗೆಯು ಗ್ರಾಂಡ್ ಮೊಸಲ್ಲಾವನ್ನು ತಲುಪಿದ್ದು, ಶವಪೆಟ್ಟಿಗೆಯನ್ನು ಇರಾನ್ ಧ್ವಜದ ಬಣ್ಣಗಳಿಂದ ಅಲಂಕರಿಸಲಾಗಿತ್ತು. ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್, ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮತ್ತು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಸೇರಿದಂತೆ ಹಿರಿಯ ಇರಾನ್ ನಾಯಕರು ಖಾಮಿನೈ ಅವರಿಗೆ ಗೌರವ ಸಲ್ಲಿಸಲು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅಂತಿಮ ಸಂಸ್ಕಾರಕ್ಕೆ ಮುಂಚಿತವಾಗಿ ಗೌರವ ಸಲ್ಲಿಸಲು ಶುಕ್ರವಾರವೇ ವಿದೇಶಿ ಗಣ್ಯರು ಟೆಹರಾನ್ಗೆ ಆಗಮಿಸಿದ್ದರು.
ಖಾಮಿನೈಯವರ ಮೃತದೇಹದ ಪಟ್ಟಿಗೆಯ ಅನಾವರಣ : ಅಂತಿಮ ಸಂಸ್ಕಾರಕ್ಕೆ ನೆರೆದ ಸಾವಿರಾರು ಜನರು
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಮೃತರಾದ ಇರಾನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಮೃತದೇಹದ ಪಟ್ಟಿಗೆಯನ್ನು ಇರಾನ್ ಶನಿವಾರದಂದು ಅನಾವರಣಗೊಳಿಸಿತು. ಅವರ ಅಂತಿಮ ದರ್ಶನ ಪಡೆಯಲು ಸಾವಿರಾರು ಶೋಕತಪ್ತರು ಜಮಾಯಿಸಿದ್ದರು.
ಅಂತಿಮ ಸಂಸ್ಕಾರದ ವಿಧಿವಿಧಾನಗಳು ಆರಂಭವಾಗುತ್ತಿದ್ದಂತೆ, ಇರಾನ್ ಧ್ವಜವನ್ನು ಹೊದಿಸಲಾಗಿದ್ದ ಮೃತದೇಹದ ಪಟ್ಟಿಗೆಯ ಸುತ್ತಲೂ ನೆರೆದಿದ್ದ ದುಃಖಿತ ಜನಸಾಗರವು ಪ್ರಾರ್ಥನೆ ಸಲ್ಲಿಸುತ್ತಿರುವ ಮತ್ತು ಘೋಷಣೆಗಳನ್ನು ಕೂಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇರಾನ್ನ ಸರ್ವೋಚ್ಚ ನಾಯಕರಾಗಿದ್ದ ಖಾಮಿನೈ ಅವರಿಗೆ ಒಂದು ವಾರದ ಕಾಲ ನಡೆಯಲಿರುವ ವಿದಾಯದ ಹೆಜ್ಜೆಯಾಗಿ ಈ ಅಂತಿಮ ಸಂಸ್ಕಾರವು ಆರಂಭವಾಗಿದೆ. ಇರಾನ್ ಧ್ವಜ ಹೊದಿಸಲಾದ ಅವರ ಮೃತದೇಹದ ಪಟ್ಟಿಗೆಯನ್ನು ಟೆಹರಾನ್ನ ಗ್ರಾಂಡ್ ಮೊಸಲ್ಲಾಗೆ ತರಲಾಗಿದ್ದು, ಅಲ್ಲಿ ಜನರು ಅಂತಿಮ ಗೌರವ ಸಲ್ಲಿಸಲು ನೆರೆದಿದ್ದಾರೆ. ಶೋಕಾಚರಣೆ ಮತ್ತು ವಿದಾಯ ಕಾರ್ಯಕ್ರಮಗಳು ಆರಂಭವಾಗುತ್ತಿದ್ದಂತೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹಾಗೂ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಭಾವುಕರಾಗಿ ಕಣ್ಣೀರು ಹಾಕಿದರು.
ಮೃತ ನಾಯಕನಿಗೆ ವಿದಾಯ ಹೇಳುವ ಈ ಸಮಾರಂಭಗಳಲ್ಲಿ ಸುಮಾರು 1.5 ರಿಂದ 2 ಕೋಟಿ ಜನರು ಭಾಗವಹಿಸಲಿದ್ದಾರೆ ಎಂದು ಇರಾನ್ ಅಧಿಕಾರಿಗಳು ಅಂದಾಜಿಸಿದ್ದಾರೆ. ದೇಶದಾದ್ಯಂತ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ರಾಜಧಾನಿ ಟೆಹರಾನ್ ಮತ್ತು ಅದರ ಸುತ್ತಮುತ್ತ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.






