Bahrain | ‘ಯೆಮೆನ್ ನಲ್ಲಿ ಸ್ಥಿರತೆಯಿಲ್ಲದೆ ಪ್ರಾದೇಶಿಕ ಭದ್ರತೆ ಸಾಧ್ಯವಿಲ್ಲ’: ವಿದೇಶಾಂಗ ಸಚಿವೆ
ತೈಝ್ ಮುತ್ತಿಗೆ ತೆರವುಗೊಳಿಸಲು ಅಂತರರಾಷ್ಟ್ರೀಯ ಸಮುದಾಯದ ಮಧ್ಯಪ್ರವೇಶಕ್ಕೆ ಆಗ್ರಹ

Photo: x.com/yemen_mofa
ಮನಾಮಾ: ಯೆಮೆನ್ ನಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸದೆ ಪ್ರಾದೇಶಿಕ ಭದ್ರತೆಯನ್ನು ಖಾತರಿಪಡಿಸಲು ಸಾಧ್ಯವಿಲ್ಲ. ದೇಶದ ಎಲ್ಲ ಪ್ರದೇಶಗಳಲ್ಲೂ ಸರ್ಕಾರದ ಅಧಿಕಾರ ಸ್ಥಾಪನೆಯಾಗಬೇಕು ಎಂದು ಯೆಮೆನ್ ನ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಸರ್ಕಾರದ ವಿದೇಶಾಂಗ ಸಚಿವೆ ಅಫ್ರಾ ಅಲ್-ಜೌಬಾ ಪ್ರತಿಪಾದಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಬಹ್ರೇನ್ ನಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಯೆಮೆನ್ ನ ಸರ್ಕಾರಿ ಸಂಸ್ಥೆಗಳನ್ನು ಪುನಃಸ್ಥಾಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿಯೂ ಅವರು ಸಂದೇಶ ಹಂಚಿಕೊಂಡಿದ್ದಾರೆ.
‘ಸ್ಥಿರ ಯೆಮೆನ್ ಇಲ್ಲದೆ ಸುಸ್ಥಿರ ಪ್ರಾದೇಶಿಕ ಭದ್ರತೆ ಸಾಧ್ಯವಿಲ್ಲ. ದೇಶದ ಎಲ್ಲ ಪ್ರದೇಶಗಳ ಮೇಲೂ ಸರ್ಕಾರದ ಅಧಿಕಾರ ಇರಬೇಕು. ಶಸ್ತ್ರಾಸ್ತ್ರಗಳ ನಿಯಂತ್ರಣ ಹಾಗೂ ಯುದ್ಧ ಅಥವಾ ಶಾಂತಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಕಾನೂನುಬದ್ಧ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಇರಬೇಕು’ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಹೂತಿ ಬಂಡುಕೋರರು ತೈಝ್ ನಗರಕ್ಕೆ ಹಾಕಿರುವ ಮುತ್ತಿಗೆಯನ್ನು ಅಲ್-ಜೌಬಾ ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ‘ಯುದ್ಧಾಪರಾಧ’ ಎಂದು ಹೇಳಿರುವ ಅವರು, ಮುತ್ತಿಗೆಯನ್ನು ತೆರವುಗೊಳಿಸಲು ಅಂತರರಾಷ್ಟ್ರೀಯ ಸಮುದಾಯ ದೃಢವಾದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇರಾನ್ ಬೆಂಬಲಿತ ಹೂತಿ ಬಂಡುಕೋರರು ಸೆಪ್ಟೆಂಬರ್ನಲ್ಲಿ ಕೆಂಪು ಸಮುದ್ರದ ಕರಾವಳಿಯುದ್ದಕ್ಕೂ ಇರುವ ಆಯಕಟ್ಟಿನ ಪ್ರದೇಶವನ್ನು ವಶಪಡಿಸಿಕೊಂಡ ಬಳಿಕ ಯೆಮೆನ್ ನಲ್ಲಿ ಸಂಘರ್ಷ ತೀವ್ರಗೊಂಡಿದೆ. ಇದಕ್ಕೆ ಪ್ರತಿಯಾಗಿ ಸರ್ಕಾರಿ ಪಡೆಗಳು ಪ್ರತಿದಾಳಿ ನಡೆಸಿವೆ.
ಸರ್ಕಾರಿ ಪಡೆಗಳ ಕಾರ್ಯಾಚರಣೆಗೆ ಸೌದಿ ಅರೇಬಿಯ ಬೆಂಬಲ ನೀಡಿದೆ. ಇದಕ್ಕೆ ಪ್ರತೀಕಾರವಾಗಿ ಹೂತಿ ಬಂಡುಕೋರರು ಯೆಮೆನ್ ನ ವಿಮಾನ ನಿಲ್ದಾಣಗಳು ಮತ್ತು ತೈಲ ಸೌಲಭ್ಯಗಳ ಮೇಲೆ ದಾಳಿ ನಡೆಸಿದ್ದಾರೆ.






