25 ವರ್ಷಗಳ ಬಳಿಕ ಇಂಗ್ಲೆಂಡ್ ಗೆ ಬ್ಯಾಲನ್ ಡಿ'ಓರ್ ಗೌರವ; ಹ್ಯಾರಿ ಕೇನ್ ಗೆ ಪ್ರತಿಷ್ಠಿತ ಪ್ರಶಸ್ತಿ
ಮಹಿಳಾ ವಿಭಾಗದಲ್ಲಿ ಅಲೆಕ್ಸಿಯಾ ಪುಟೆಲ್ಲಾಸ್ ಗೆ ಮೂರನೇ ಕಿರೀಟ

Photo: x.com/AhmadRehanKhan
ಲಂಡನ್: ಗೋಲುಗಳ ಸುರಿಮಳೆ, ಸತತ ಅತ್ಯುತ್ತಮ ಪ್ರದರ್ಶನ ಮತ್ತು ತಂಡದ ಯಶಸ್ಸಿನ ಬಲದಿಂದ ಬೇಯರ್ನ್ ಮ್ಯೂನಿಚ್ ಹಾಗೂ ಇಂಗ್ಲೆಂಡ್ ತಂಡದ ಸ್ಟ್ರೈಕರ್ ಹ್ಯಾರಿ ಕೇನ್ ಫುಟ್ಬಾಲ್ ನ ಪ್ರತಿಷ್ಠಿತ ವೈಯಕ್ತಿಕ ಗೌರವವಾದ 2026ರ ಬ್ಯಾಲನ್ ಡಿ'ಓರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. 25 ವರ್ಷಗಳ ಬಳಿಕ ಈ ಪ್ರಶಸ್ತಿ ಗೆದ್ದ ಇಂಗ್ಲೆಂಡ್ ನ ಮೊದಲ ಆಟಗಾರ ಎಂಬ ಹೆಗ್ಗಳಿಕೆಯೂ ಅವರದಾಗಿದೆ. ಮಹಿಳಾ ವಿಭಾಗದಲ್ಲಿ ಸ್ಪೇನ್ ನ ಮಿಡ್ಫೀಲ್ಡರ್ ಅಲೆಕ್ಸಿಯಾ ಪುಟೆಲ್ಲಾಸ್ ಪ್ರಶಸ್ತಿ ಗೆದ್ದಿದ್ದಾರೆ ಎಂದು Aljazeera ವರದಿ ಮಾಡಿದೆ.
2001ರಲ್ಲಿ ಮೈಕೆಲ್ ಓವನ್ ಬ್ಯಾಲನ್ ಡಿ'ಓರ್ ಗೆದ್ದ ಬಳಿಕ ಇಂಗ್ಲೆಂಡ್ ನ ಯಾವುದೇ ಆಟಗಾರನಿಗೆ ಈ ಗೌರವ ಒಲಿದಿರಲಿಲ್ಲ. ಇದೀಗ ಕೇನ್ ಆ ಬರವನ್ನು ನೀಗಿಸಿದ್ದಾರೆ.
ಸೋಮವಾರ ಲಂಡನ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿದ ಕೇನ್, ‘ವಾವ್, ವಾವ್, ವಾವ್! ನನ್ನ ಬಳಿ ಮಾತನಾಡಲು ಪದಗಳೇ ಇಲ್ಲದಂತಾಗಿದೆ. ಲಂಡನ್ ನಲ್ಲಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿದೆ. ಇದು ನನಗೆ ಶುಭ ಸೂಚನೆಯಾಗಿದೆ. ನನಗಾಗಿ ಮತ ಹಾಕಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಈ ವರ್ಷ ವಿಜೇತರನ್ನು ಆಯ್ಕೆ ಮಾಡುವುದು ಕಷ್ಟವಾಗಿತ್ತು ಎಂದು ಊಹಿಸಬಲ್ಲೆ’ ಎಂದರು.
‘ಇಲ್ಲಿ ವಿಶ್ವದರ್ಜೆಯ ಆಟಗಾರರು ಉಪಸ್ಥಿತರಿದ್ದಾರೆ. ವಿಜೇತರು ಮತ್ತು ನಾಮನಿರ್ದೇಶಿತರೆಲ್ಲರಿಗೂ ಅಭಿನಂದನೆಗಳು. ದೃಢನಿಶ್ಚಯ ಮತ್ತು ಕಠಿಣ ಪರಿಶ್ರಮದಿಂದ ಏನನ್ನು ಸಾಧಿಸಬಹುದು ಎಂಬುದಕ್ಕೆ ನಿಮ್ಮ ಸಾಧನೆಗಳೇ ಸಾಕ್ಷಿ’ ಎಂದು ಹೇಳಿದರು.
ಗೋಲುಗಳ ದಾಖಲೆ, ಪ್ರಶಸ್ತಿಗಳ ಬೇಟೆ
2023ರಲ್ಲಿ ಬೇಯರ್ನ್ ಮ್ಯೂನಿಚ್ ತಂಡಕ್ಕೆ ಸೇರ್ಪಡೆಯಾದ ಕೇನ್, ತಂಡದ ಬಹುಕಾಲದ ಟ್ರೋಫಿ ಬರವನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2025-26ರ ಋತುವಿನಲ್ಲಿ ಅವರ ಪ್ರದರ್ಶನ ಮತ್ತಷ್ಟು ಎತ್ತರಕ್ಕೇರಿತು. ದೇಶೀಯ ಲೀಗ್ ಮತ್ತು ಕಪ್ ಪ್ರಶಸ್ತಿಗಳನ್ನು ಗೆದ್ದ ಬೇಯರ್ನ್ ಪರ ಎಲ್ಲ ಸ್ಪರ್ಧೆಗಳಲ್ಲಿ ಆಡಿದ 51 ಪಂದ್ಯಗಳಿಂದ 61 ಗೋಲುಗಳನ್ನು ಗಳಿಸಿದರು.
ಕ್ಲಬ್ ಮತ್ತು ದೇಶದ ಪರವಾಗಿ ಒಟ್ಟು 73 ಗೋಲುಗಳೊಂದಿಗೆ ಋತುವನ್ನು ಮುಗಿಸಿದ ಕೇನ್, ಯುರೋಪಿನ ಪ್ರಮುಖ ಗೋಲು ಗಳಿಕೆದಾರರ ಸಾಲಿನಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದರು. ನಿರ್ಣಾಯಕ ಪಂದ್ಯಗಳಲ್ಲಿ ಗೋಲು ಗಳಿಸುವ ಅವರ ಸಾಮರ್ಥ್ಯ ಬೇಯರ್ನ್ ಗೆ ಪ್ರಶಸ್ತಿಗಳನ್ನು ತಂದುಕೊಡುವುದರ ಜತೆಗೆ ಇಂಗ್ಲೆಂಡ್ ತಂಡದ ಯಶಸ್ಸಿಗೂ ನೆರವಾಯಿತು.
ವಿಶ್ವಕಪ್ ನಲ್ಲಿ ಹಲವು ದಶಕಗಳಿಂದ ಕಾಡುತ್ತಿದ್ದ ನಿರಾಸೆಯನ್ನು ಅಂತ್ಯಗೊಳಿಸುವ ಗುರಿಯೊಂದಿಗೆ ಕಣಕ್ಕಿಳಿದ ಇಂಗ್ಲೆಂಡ್ ತಂಡದ ಪ್ರಮುಖ ಶಕ್ತಿಯಾಗಿಯೂ ಕೇನ್ ಹೊರಹೊಮ್ಮಿದರು. ಟೂರ್ನಿಯಲ್ಲಿ ಆರು ಗೋಲುಗಳನ್ನು ಗಳಿಸಿದ ಅವರು, ತಂಡವನ್ನು ಸೆಮಿಫೈನಲ್ ಗೆ ಮುನ್ನಡೆಸಿದರು. ಗೋಲು ಗಳಿಸುವ ನಿಖರತೆ, ನಾಯಕತ್ವ ಮತ್ತು ಒತ್ತಡದ ಸಂದರ್ಭಗಳಲ್ಲಿನ ಶಾಂತ ಸ್ವಭಾವ ಅವರ ಆಟದ ಪ್ರಮುಖ ಆಕರ್ಷಣೆಯಾಗಿತ್ತು.
ಅವಕಾಶಕ್ಕಾಗಿ ಪರದಾಡಿದ ಆಟಗಾರನಿಂದ ವಿಶ್ವದ ಶ್ರೇಷ್ಠ ಸ್ಟ್ರೈಕರ್ ವರೆಗೆ
ವೃತ್ತಿಜೀವನದ ಆರಂಭದಲ್ಲಿ ಟೊಟೆನ್ಹ್ಯಾಮ್ ಹಾಟ್ಸ್ಪರ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಪರದಾಡಿದ್ದ ಕೇನ್, ಒಂದು ಕ್ಲಬ್ನಿಂದ ಮತ್ತೊಂದು ಕ್ಲಬ್ಗೆ ತಾತ್ಕಾಲಿಕವಾಗಿ ಆಟವಾಡಲು ಕಳುಹಿಸಲಾದ ಆಟಗಾರನಾಗಿ ತೆರಳಿದ್ದರು. ಆದರೆ, ಸತತ ಪರಿಶ್ರಮದಿಂದ ತಮ್ಮ ಪೀಳಿಗೆಯ ಅತ್ಯಂತ ಸಮರ್ಥ ಸೆಂಟರ್ ಫಾರ್ವರ್ಡ್ ಆಟಗಾರರಲ್ಲಿ ಒಬ್ಬರಾಗಿ ಬೆಳೆದರು.
ಗೋಲು ಗಳಿಸುವುದಷ್ಟೇ ಅಲ್ಲದೆ, ಸಹ ಆಟಗಾರರಿಗೆ ಅವಕಾಶಗಳನ್ನು ಸೃಷ್ಟಿಸುವ ಪ್ಲೇಮೇಕರ್ ಆಗಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಅವರ ಸ್ಥಿರ ಪ್ರದರ್ಶನ, ಆಟದ ಕುರಿತ ಬುದ್ಧಿವಂತಿಕೆ ಮತ್ತು ಗೋಲು ಗಳಿಕೆಯ ಸಾಮರ್ಥ್ಯಕ್ಕೆ ಬ್ಯಾಲನ್ ಡಿ'ಓರ್ ಪ್ರಶಸ್ತಿ ಮನ್ನಣೆ ನೀಡಿದೆ.
ಈ ಬಾರಿಯ ಪ್ರಶಸ್ತಿ ಸ್ಪರ್ಧೆ ತೀವ್ರವಾಗಿತ್ತು. ಕೈಲಿಯನ್ ಎಂಬಾಪೆ ವಿಶ್ವಕಪ್ ನ ಗೋಲು ಗಳಿಕೆಯ ದಾಖಲೆಗಳನ್ನು ಮುರಿದಿದ್ದರೆ, ಲ್ಯಾಮಿನ್ ಯಮಲ್ ಸ್ಪೇನ್ ತಂಡ ವಿಶ್ವಕಪ್ ಗೆಲ್ಲುವಲ್ಲಿ ನೆರವಾಗಿದ್ದರು. ಆದರೆ, ಇಡೀ ಋತುವಿನಾದ್ಯಂತ ಸ್ಥಿರ ಪ್ರದರ್ಶನ ನೀಡಿದ ಕೇನ್ ಗೆ ಮತದಾರರು ಮನ್ನಣೆ ನೀಡಿದರು.
33ನೇ ವಯಸ್ಸಿನಲ್ಲಿ ಬ್ಯಾಲನ್ ಡಿ'ಓರ್ ಗೆದ್ದಿರುವ ಕೇನ್, ಇಂಗ್ಲೆಂಡ್ ನ ಸಾರ್ವಕಾಲಿಕ ಪ್ರಮುಖ ಗೋಲು ಗಳಿಕೆದಾರರಲ್ಲಿ ಒಬ್ಬರಾಗಿದ್ದಾರೆ. ವಿಶ್ವಕಪ್ ನಲ್ಲೂ ಇಂಗ್ಲೆಂಡ್ ಪರ ದಾಖಲೆಯ ಗೋಲು ಗಳಿಸಿರುವ ಅವರು, ಫುಟ್ಬಾಲ್ ನ ಶ್ರೇಷ್ಠ ಸ್ಟ್ರೈಕರ್ ಗಳ ಸಾಲಿನಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.
ಪುಟೆಲ್ಲಾಸ್ ಗೆ ಮೂರನೇ ಕಿರೀಟ
ಮಹಿಳಾ ವಿಭಾಗದಲ್ಲಿ ಸ್ಪೇನ್ ನ ಮಿಡ್ಫೀಲ್ಡರ್ ಅಲೆಕ್ಸಿಯಾ ಪುಟೆಲ್ಲಾಸ್ ಮೂರನೇ ಬಾರಿಗೆ ಬ್ಯಾಲನ್ ಡಿ'ಓರ್ ಫೆಮಿನಿನ್ ಪ್ರಶಸ್ತಿ ಗೆದ್ದಿದ್ದಾರೆ. 2025-26ರ ಋತುವಿನಲ್ಲಿ ಬಾರ್ಸಿಲೋನಾ ತಂಡದ ಪರ ತ್ರಿವಳಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಸ್ಪ್ಯಾನಿಷ್ ಸೂಪರ್ ಕಪ್ ಗೆಲುವಿನಲ್ಲೂ ಕೊಡುಗೆ ನೀಡಿದ್ದರು.
ಬಾರ್ಸಿಲೋನಾ ತಂಡದೊಂದಿಗೆ 14 ವರ್ಷಗಳ ಸಂಬಂಧ ಹೊಂದಿದ್ದ ಪುಟೆಲ್ಲಾಸ್, ಜುಲೈನಲ್ಲಿ ಮಹಿಳಾ ಸೂಪರ್ ಲೀಗ್ನ ಲಂಡನ್ ಸಿಟಿ ಲಯನೆಸ್ ತಂಡಕ್ಕೆ ಸೇರ್ಪಡೆಯಾಗಿದ್ದರು.






