ಭಾರತದ ಜೊತೆಗಿನ ಉದ್ವಿಗ್ನತೆ ಮಧ್ಯೆ ಪಾಕ್ಗೆ ಏಟು ಕೊಟ್ಟ ಬಲೂಚ್ ಲಿಬರೇಶನ್ ಆರ್ಮಿ
ಪಾಕಿಸ್ತಾನದ ಮಿಲಿಟರಿ, ಗುಪ್ತಚರ ನೆಲೆಗಳನ್ನು ಗುರಿಯಾಗಿಸಿ 51ಕ್ಕೂ ಅಧಿಕ ಸ್ಥಳಗಳಲ್ಲಿ ಸಂಘಟಿತ ದಾಳಿ

Photo credit: X
ಬಲೂಚಿಸ್ತಾನ: ಬಲೂಚಿಸ್ತಾನದಾದ್ಯಂತ ಪಾಕಿಸ್ತಾನದ ಮಿಲಿಟರಿ ಮತ್ತು ಗುಪ್ತಚರ ತಾಣಗಳನ್ನು ಗುರಿಯಾಗಿಸಿಕೊಂಡು 51ಕ್ಕೂ ಅಧಿಕ ಸ್ಥಳಗಳಲ್ಲಿ ನಡೆದ 71 ಸಂಘಟಿತ ದಾಳಿಗಳ ಜವಾಬ್ದಾರಿಯನ್ನು ಬಲೂಚಿಸ್ತಾನ ಲಿಬರೇಶನ್ ಆರ್ಮಿ (ಬಿಎಲ್ಎ) ಹೊತ್ತುಕೊಂಡಿದೆ ಎಂದು ವರದಿಯಾಗಿದೆ.
ಬಲೂಚಿಸ್ತಾನ ಲಿಬರೇಶನ್ ಆರ್ಮಿ ವಿದೇಶಿ ಏಜೆಂಟ್ ಎಂಬ ಆರೋಪವನ್ನು ತಿರಸ್ಕರಿಸಿದೆ. ಈ ಪ್ರದೇಶದ ಕ್ರಿಯಾತ್ಮಕ ಮತ್ತು ನಿರ್ಣಾಯಕ ಪಕ್ಷ ಎಂದು ಹೇಳಿಕೊಂಡಿದೆ. ಪಾಕಿಸ್ತಾನದ ಪ್ರತಿಯೊಂದು ಶಾಂತಿ ಮಾತುಕತೆ, ಕದನ ವಿರಾಮ ಮತ್ತು ಸಹೋದರತ್ವ ಕೇವಲ ವಂಚನೆ, ಯುದ್ಧ ತಂತ್ರ ಮತ್ತು ತಾತ್ಕಾಲಿಕ ಕುತಂತ್ರ ಎಂದು ಬಿಎಲ್ಎ ಹೇಳಿದೆ.
ಪಾಕಿಸ್ತಾನದ ಮೋಸದ ಶಾಂತಿ ಮಾತುಕತೆಗೆ ಭಾರತ ಮತ್ತು ಅಂತಾರಾಷ್ಟ್ರೀಯ ಸಮುದಾಯ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು. ಪಾಕಿಸ್ತಾನದ ಕೈಗಳು ರಕ್ತದ ಕಲೆಗಳಿಂದ ಕೂಡಿದೆ. ಅದರ ಪ್ರತಿಯೊಂದು ಭರವಸೆಯೂ ಅದರಲ್ಲಿ ನೆನೆದಿದೆ ಎಂದು ಬಲೂಚಿಸ್ತಾನ ಲಿಬರೇಶನ್ ಆರ್ಮಿ ಹೇಳಿದೆ.
ಪ್ರತ್ಯೇಕ ಪ್ರಕಟಣೆಯಲ್ಲಿ ಪಾಕಿಸ್ತಾನದ ಮಿಲಿಟರಿ ನೆಲೆಗಳ ವಿರುದ್ಧ ದೊಡ್ಡ ಪ್ರಮಾಣದ ಸಂಘಟಿತ ದಾಳಿ ನಡೆಸಿರುವುದಾಗಿ ಬಿಎಲ್ಎ ಹೇಳಿಕೊಂಡಿದೆ. ಬಿಎಲ್ಎ ವಕ್ತಾರ ಜೀಯಂದ್ ಬಲೋಚ್ ಪ್ರಕಾರ, ಈ ವಾರದ ಆರಂಭದಲ್ಲಿ ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನತೆ ಸೃಷ್ಟಿಯಾಗಿದ್ದಾಗ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಪಾಕಿಸ್ತಾನಿ ಮಿಲಿಟರಿಗೆ ಮತ್ತೊಂದು ಹೊಡೆತ ನೀಡಿದೆ.
ಅದು ಆಕ್ರಮಿತ ಬಲೂಚಿಸ್ತಾನದಾದ್ಯಂತ ಮಿಲಿಟರಿ ಬೆಂಗಾವಲುಗಳು, ಗುಪ್ತಚರ ಕೇಂದ್ರಗಳು ಮತ್ತು ಖನಿಜ ಸಾಗಣೆ ವಾಹನಗಳನ್ನು ಗುರಿಯಾಗಿಸಿ 51ಕ್ಕೂ ಹೆಚ್ಚು ಸ್ಥಳಗಳಲ್ಲಿ 71 ಸಂಘಟಿತ ದಾಳಿಗಳನ್ನು ನಡೆಸಿತು. ಈ ದಾಳಿಗಳ ಉದ್ದೇಶವು ಶತ್ರುಗಳನ್ನು ನಾಶಮಾಡುವುದು ಮಾತ್ರವಲ್ಲ, ಭವಿಷ್ಯದ ಸಂಘಟಿತ ಯುದ್ಧಕ್ಕೆ ಸಿದ್ಧತೆ ಬಗ್ಗೆ ಪರೀಕ್ಷಿಸುವ ಗುರಿ ಹೊಂದಿತ್ತು ಎಂದು ಬಲೋಚ್ ಹೇಳಿದರು.
ಪಾಕಿಸ್ತಾನ ಭಯೋತ್ಪಾದನೆಯ ಸಂತಾನೋತ್ಪತ್ತಿಯ ನೆಲ. ಪಾಕಿಸ್ತಾನ ಜಾಗತಿಕ ಭಯೋತ್ಪಾದಕರಿಗೆ ಮಾತ್ರವಲ್ಲದೆ, ಲಷ್ಕರೆ ತೈಬಾ, ಜೈಶೆ ಮೊಹಮ್ಮದ್ ಮತ್ತು ಐಸ್ಐಎಸ್ನಂತಹ ರಾಜ್ಯ ಪ್ರಾಯೋಜಿತ ಭಯೋತ್ಪಾದಕ ಸಂಘಟನೆಯ ಬೆಳವಣಿಗೆಯ ಕೇಂದ್ರವಾಗಿದೆ. ಈ ಭಯೋತ್ಪಾದನೆಯ ಹಿಂದಿನ ಜಾಲ ಐಎಸ್ಐ, ಪಾಕಿಸ್ತಾನ ಹಿಂಸಾತ್ಮಕ ಸಿದ್ಧಾಂತದ ಪರಮಾಣು ರಾಷ್ಟ್ರವಾಗಿದೆ ಎಂದು ಬಿಎಲ್ಎ ಹೇಳಿಕೊಂಡಿದೆ.
ಪ್ರಸ್ತುತ ನಡೆಯುತ್ತಿರುವ ಈ ಬೆಳವಣಿಗೆಯು ಈ ಪ್ರದೇಶದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ವಿಮೋಚನಾ ಚಳುವಳಿಗಳ ಭಾಗವಾಗಿದೆ.







