ಪಾಕಿಸ್ತಾನವನ್ನು ಭಯೋತ್ಪಾದಕರ ರಾಷ್ಟ್ರವೆಂದು ಗುರುತಿಸಲು ಬಲೂಚಿಸ್ತಾನ್ ಆಗ್ರಹ

ಸಾಂದರ್ಭಿಕ ಚಿತ್ರ | PC : NDTV
ಇಸ್ಲಾಮಾಬಾದ್: ಪಾಕಿಸ್ತಾನವು ಜಾಗತಿಕ ಭಯೋತ್ಪಾದಕರ `ಸಂತಾನೋತ್ಪತ್ತಿ ಕೇಂದ್ರ'ವಾಗಿರುವುದರಿಂದ ಅದನ್ನು ಭಯೋತ್ಪಾದಕರ ರಾಷ್ಟ್ರವೆಂದು ಗುರುತಿಸುವಂತೆ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ(ಬಿಎಲ್ಎ) ಆಗ್ರಹಿಸಿದೆ.
ಕಳೆದ ಕೆಲವು ವಾರಗಳಿಂದ `ಆಪರೇಷನ್ ಹೀರೋಫ್' ಅಡಿಯಲ್ಲಿ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತದಾದ್ಯಂತ 51ಕ್ಕೂ ಹೆಚ್ಚು ಸ್ಥಳಗಳಲ್ಲಿ 71 ಸಂಯೋಜಿತ ದಾಳಿಗಳನ್ನು ನಡೆಸಲಾಗಿದೆ. ಕಚ್, ಪಂಜ್ಗುರ್, ಮಾಸ್ಟುಂಗ್, ಕ್ವೆಟಾ, ಝಮುರನ್, ತೊಲಾಂಗಿ, ಕುಲುಕಿ ಮತ್ತು ನುಷ್ಕಿ ಪ್ರದೇಶಗಳಲ್ಲಿ ಪಾಕಿಸ್ತಾನದ ಮಿಲಿಟರಿ ಹಾಗೂ ಗುಪ್ತಚರ ನೆಲೆಗಳ ಜೊತೆಗೆ ಪ್ರಮುಖ ರಸ್ತೆಗಳು, ಹೆದ್ದಾರಿಗಳ ಬದಿಯಲ್ಲಿರುವ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಬಲೂಚ್ ಲಿಬರೇಷನ್ ಆರ್ಮಿ(ಬಿಎಲ್ಎ) ಪ್ರತಿಪಾದಿಸಿದೆ.
ಬಿಎಲ್ಎ ಎಂಬುದು ಬಲೂಚ್ ಜನರ ಸ್ವ- ನಿರ್ಣಯ ಚಳವಳಿಯನ್ನು ಮುನ್ನಡೆಸುತ್ತಿರುವ ಸಶಸ್ತ್ರ ಹೋರಾಟಗಾರರ ಗುಂಪು. 1948ರಲ್ಲಿ ಬಲೂಚಿಸ್ತಾನವನ್ನು ಬಲವಂತವಾಗಿ ಪಾಕಿಸ್ತಾನದೊಂದಿಗೆ ಸಂಯೋಜಿಸಿದಾಗಿನಿಂದ ಪಾಕಿಸ್ತಾನದ ಆಡಳಿತವು ತಮ್ಮನ್ನು ಕಡೆಗಣಿಸುತ್ತಿದ್ದು, ತಮ್ಮ ಪ್ರಾಕೃತಿಕ ಸಂಪನ್ಮೂಲಗಳನ್ನು ಶೋಷಣೆ ಮಾಡುತ್ತಿದೆ ಮತ್ತು ಸರ್ಕಾರಿ ಪ್ರಾಯೋಜಿತ ಹತ್ಯೆ ಹಾಗೂ ಬಲವಂತದ ನಾಪತ್ತೆಗಳ ರೂಪದಲ್ಲಿ ವ್ಯವಸ್ಥಿತ ಹಿಂಸಾಚಾರ ನಡೆಸುತ್ತಿದೆ ಎಂದು ಬಲೂಚಿಸ್ತಾನದ ಜನತೆ ಆಪಾದಿಸುತ್ತಿದ್ದಾರೆ.





