ಬ್ಯಾಂಕಾಕ್ |ದಿಢೀರ್ ಕುಸಿದ ರಸ್ತೆ; 50 ಅಡಿ ಆಳಕ್ಕೆ ಬಿದ್ದ ಕಾರುಗಳು!

Photo credit: X/@KhaosodEnglish
ಬ್ಯಾಂಕಾಕ್: ಸಿನಿಮೀಯ ಘಟನೆಯೊಂದರಲ್ಲಿ ಏಕಾಏಕಿ ಭಾರಿ ಭೂಕುಸಿತವುಂಟಾಗಿ, ರಸ್ತೆಯಲ್ಲಿನ ಕಾರುಗಳು 50 ಅಡಿ ಕಂದಕಕ್ಕೆ ಉರುಳಿ ಬಿದ್ದಿರುವ ಘಟನೆ ಬ್ಯಾಂಕಾಕ್ ನಲ್ಲಿ ನಡೆದಿದೆ.
ಅಧಿಕಾರಿಗಳ ಮಾಹಿತಿಯಂತೆ, ಈ ರಸ್ತೆಯಲ್ಲಿ ಭೂತಳ ರೈಲು ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ, ಭೂಕುಸಿತವುಂಟಾಗಿದೆ. ಈ ವೇಳೆ ಮೂರು ಕಾರುಗಳಿಗೆ ಹಾನಿ ಸಂಭವಿಸಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ದಿಢೀರನೆ ಭೂಮಿ ಕುಸಿಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭೂಮಿ ನಿಧಾನವಾಗಿ ಕುಸಿಯುತ್ತಿರುವ ದೃಶ್ಯ ಅದರಲ್ಲಿ ಸೆರೆಯಾಗಿದೆ. ಇದಲ್ಲದೆ, ಸುತ್ತಮುತ್ತಲಿನ ವಿದ್ಯುತ್ ಕಂಬ ಹಾಗೂ ನೀರಿನ ಪೈಪ್ ಗಳಿಗೂ ಹಾನಿಯಾಗಿರುವುದು ಈ ದೃಶ್ಯದಲ್ಲಿ ಕಂಡು ಬಂದಿದೆ. ಈ ಭೂಕುಸಿತದಿಂದಾಗಿ ನಾಲ್ಕು ಪಥದ ರಸ್ತೆಯ ಮಾರ್ಗ ಸಂಪೂರ್ಣವಾಗಿ ಕಡಿತಗೊಂಡಿದೆ.
ಭೂಕುಸಿತದಿಂದಾಗಿರುವ ಹಾನಿಯನ್ನು ಶೀಘ್ರವೇ ಸರಿಪಡಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.







