ಬಾಂಗ್ಲಾ ಸಂಸ್ಥಾಪಕ ಮುಜಿಬುರ್ ರಹಮಾನ್ ನಿವಾಸಕ್ಕೆ ಬೆಂಕಿ | ಹಸೀನಾ, ಕುಟುಂಬದವರ ಆಸ್ತಿಗಳ ಮೇಲೆ ದಾಳಿ
►ಶಾಂತಿ ಸ್ಥಾಪನೆಗೆ ಮಧ್ಯಂತರ ಸರಕಾರ ಮನವಿ

Photo Credit: AP
ಢಾಕ: ಬಾಂಗ್ಲಾದೇಶದಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಕುಟುಂಬ ಮತ್ತು ಅವರ ಅವಾಮಿ ಲೀಗ್ ಪಕ್ಷದ ಮುಖಂಡರ ಮನೆ, ಆಸ್ತಿಗಳ ಮೇಲೆ ಕಳೆದ ಮೂರು ದಿನಗಳಿಂದ ದಾಳಿ ಮುಂದುವರಿದಿದ್ದು ಹಸೀನಾ ಅವರ ತಂದೆ, ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರಹಮಾನ್ ಅವರ ನಿವಾಸಕ್ಕೆ ಆಕ್ರೋಶಿತ ಪ್ರತಿಭಟನಾಕಾರರು ಬೆಂಕಿ ಹಚ್ಚಿರುವುದಾಗಿ ವರದಿಯಾಗಿದೆ.
ಪ್ರತಿಭಟನೆ, ಹಿಂಸಾಚಾರ ಕೈಬಿಟ್ಟು ಶಾಂತಿಗಾಗಿ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರ ನಾಗರಿಕರಿಗೆ ಕರೆ ನೀಡಿದ್ದು ತಕ್ಷಣ ಕಾನೂನು ಸುವ್ಯವಸ್ಥೆ ಪುನಃಸ್ಥಾಪಿಸುವಂತೆ ಆಗ್ರಹಿಸಿದ್ದಾರೆ.
ಹಸೀನಾ ಬೆಂಬಲಿಗರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಗುಂಪು ಬುಧವಾರ ರಾತ್ರಿ ಹಿಂಸಾಚಾರಕ್ಕೆ ತೊಡಗಿದ್ದು ದೇಶದಾದ್ಯಂತ ಅವಾಮಿ ಲೀಗ್ ಬೆಂಬಲಿಗರ ಮನೆಗಳು, ವ್ಯಾಪಾರ ಸಂಸ್ಥೆಗಳಲ್ಲಿ ದಾಂಧಲೆ ನಡೆಸಿದ್ದರು. ರಾಜಧಾನಿ ಢಾಕಾದ ಧಾನ್ಮೊಂಡಿ ಪ್ರದೇಶದಲ್ಲಿರುವ ರಹಮಾನ್ ಅವರ ನಿವಾಸ `ಬಂಗಬಂಧು ಭವನ'ಕ್ಕೆ ಬೆಂಕಿಹಚ್ಚಲಾಗಿದೆ. 1971ರಲ್ಲಿ ಈ ಐತಿಹಾಸಿಕ ನಿವಾಸದಲ್ಲಿ ರಹಮಾನ್ ಪಾಕಿಸ್ತಾನದಿಂದ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಘೋಷಿಸಿದ್ದರು.
ಹಸೀನಾ ಅವರ ಪ್ರಚೋದನಕಾರಿ ಭಾಷಣವು ಅನಿರೀಕ್ಷಿತ ಮತ್ತು ಅನಪೇಕ್ಷಿತ ಹಿಂಸಾಚಾರಕ್ಕೆ ಕಾರಣ ಎಂದು ಮಧ್ಯಂತರ ಸರಕಾರ ದೂಷಿಸಿದೆ. ಉಚ್ಛಾಟಿತ ಪ್ರಧಾನಿಯ ವಿರುದ್ಧ ಕಾರ್ಯಕರ್ತರಿಗಿರುವ ಆಕ್ರೋಶದ ಬಗ್ಗೆ ಅರಿವಿದೆ. ಆದರೂ ನಾವು ಕಾನೂನಿನ ನಿಯಮವನ್ನು ಗೌರವಿಸುವ ರಾಷ್ಟ್ರವೆಂದು ಜಗತ್ತಿಗೆ ತೋರಿಸಲು ಕಾನೂನನ್ನು ಪಾಲಿಸುವಂತೆ ಸರಕಾರ ನಾಗರಿಕರಿಗೆ ಮನವಿ ಮಾಡುತ್ತದೆ' ಎಂದು ಯೂನುಸ್ ಅವರ ಕಚೇರಿಯ ಹೇಳಿಕೆ ತಿಳಿಸಿದೆ.
ದಾಳಿ, ದಾಂಧಲೆ ನಡೆಸಿದ ಕಾರ್ಯಕರ್ತರ ಕೋಪಕ್ಕೆ ಅರ್ಥವಿದೆ. ಯಾಕೆಂದರೆ ಅವರು, ಅವರ ಸಂಬಂಧಿಕರು ಮತ್ತು ಸ್ನೇಹಿತರು ಹಸೀನಾ ಅವರ ಅಡಿಯಲ್ಲಿ ಹಲವು ವರ್ಷ ದಬ್ಬಾಳಿಕೆಗೆ ಒಳಗಾಗಿದ್ದರು. ದೇಶದಿಂದ ಪಲಾಯನ ಮಾಡಿದ್ದರೂ ಹಸೀನಾ ತನ್ನ `ಭಯೋತ್ಪಾದಕರನ್ನು' ಒಟ್ಟುಗೂಡಿಸಿ ಬಾಂಗ್ಲಾದೇಶದ ಚೇತರಿಕೆಯನ್ನು ಹಾಳುಗೆಡವಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಿಕೆ ಆರೋಪಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಬಾಂಗ್ಲಾದೇಶಿಯರ ಜೀವ ಮತ್ತು ಆಸ್ತಿಗಳನ್ನು ರಕ್ಷಿಸಲು ಮಧ್ಯಂತರ ಸರಕಾರ ಭದ್ರತಾ ಪಡೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಯೂನುಸ್ ಹೇಳಿದ್ದಾರೆ.
ಢಾಕಾ, ಆಗ್ನೇಯ ಬಂದರು ನಗರವಾದ ಛಟ್ಟೋಗ್ರಾಮ್, ವಾಯವ್ಯದ ನಗರ ರಾಜ್ಶಾಹಿ ಮತ್ತು ರಂಗ್ಪುರ, ನೈಋತ್ಯದ ಬರಿಶಾಲ್ ಮತ್ತು ಈಶಾನ್ಯದ ಸಿಲ್ಮೆಟ್ ಸೇರಿದಂತೆ ದೇಶದಾದ್ಯಂತ ಹಸೀನಾ ಅವರ ನಿಕಟ ಸಂಬಂಧಿಗಳು ಹಾಗೂ ಅವಾಮಿ ಲೀಗ್ ಪಕ್ಷದ ನಾಯಕರ ಮನೆ, ವ್ಯಾಪಾರ, ವ್ಯವಹಾರದ ಮೇಲೆ ದಾಳಿ ನಡೆಸಲಾಗಿದೆ.
ಈ ಮಧ್ಯೆ, ದಾಂಧಲೆಯನ್ನು ನಿಯಂತ್ರಿಸಿ ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸುವಂತೆ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಷನಲಿಸ್ ಪಕ್ಷ ಮಧ್ಯಂತರ ಸರಕಾರವನ್ನು ಆಗ್ರಹಿಸಿದ್ದು ಇದಕ್ಕೆ ವಿಫಲವಾದರೆ ಫ್ಯಾಸಿಸ್ಟ್ ಪಡೆಗಳ ಪುನರುಜ್ಜೀವನಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.







