ಬಾಂಗ್ಲಾ: ಅಪರಿಚಿತರಿಂದ ಇಬ್ಬರು ರೋಹಿಂಗ್ಯಗಳ ಹತ್ಯೆ

ಸಾಂದರ್ಭಿಕ ಚಿತ್ರ | Photo: PTI
ಢಾಕಾ: ಬಾಂಗ್ಲಾ ರಾಜಧಾನಿ ಢಾಕಾದ ಕಾಕ್ಸ್ ಬಝಾರ್ನ ಉಖಿಯಾ ಉಪಜಿಲ್ಲಾ ಪ್ರದೇಶದಲ್ಲಿ ಗುರುವಾರ ನಸುಕಿನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಅಪರಿಚಿತತ ಬಂದೂಕುಧಾರಿಗಳು ಇಬ್ಬರು ರೋಹಿಂಗ್ಯಗಳನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಮೃತರಲ್ಲೊಬ್ಬನನ್ನು ಉಖಿಯಾದ ಕ್ಯಾಂಪ್ 17ರ ನಿವಾಸಿ, 27 ವರ್ಷ ವಯಸ್ಸಿನ ಅಬ್ದುಲ್ಲಾ ಎಂದು ಗುರುತಿಸಲಾಗಿದೆ. ಇನ್ನೋರ್ವನ ಗುರುತು ತಿಳಿದುಬಂದಿಲ್ಲವೆಂದು ಅವರು ಹೇಳಿದ್ದಾರೆ.
20-30ರ ಆಸುಪಾಸು ವಯಸ್ಸಿನ ಯುವಕರ ಗುಂಪೊಂದು ಮುಂಜಾನೆ 5 ಗಂಟೆಗೆ ಕ್ಯಾಂಪ್ 17 ಪ್ರದೇಶವನ್ನು ಪ್ರವೇಶಿಸಿದ್ದು, ಅಬ್ದುಲ್ಲಾನ ಮೇಲೆ ಗುಂಡಿನ ಮಳೆಗರೆದಿತ್ತು ಎಂದು ಉಖಿಯಾ ಪೊಲೀಸ್ ಠಾಣಾ ಉಸ್ತುವಾರಿ ಅಧಿಕಾರಿ ಶಮೀಂ ಹುಸೈನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಡೈಲಿ ಸ್ಟಾರ್ ವರದಿ ಮಾಡಿದೆ.
ಇದೇ ವಿಷಯವಾಗಿ ಇನ್ನೋರ್ವ ರೋಹಿಂಗ್ಯ ವ್ಯಕ್ತಿಯನ್ನು ಮುಂಜಾನೆ 6 ಗಂಟೆಯ ವೇಳೆಗೆ ಇನ್ನೊಂದು ಗುಂಪು ಗುಂಡಿಕ್ಕಿ ಹತ್ಯೆಗೈದಿದೆ.
ಮೃತದೇಹಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಕಾಕ್ಸ್ಝಾರ್ನ ಸದರ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.





