ಬಾಂಗ್ಲಾದೇಶ: ಹೊಸ ಪಕ್ಷ ಸ್ಥಾಪನೆಗೆ ವಿದ್ಯಾರ್ಥಿ ಸಂಘಟನೆ ನಿರ್ಧಾರ

PC : NDTV
ಢಾಕಾ: ಕಳೆದ ವರ್ಷ ಶೇಖ್ ಹಸೀನಾ ಸರಕಾರದ ಪದಚ್ಯುತಿಗೆ ಮೂಲ ಕಾರಣವಾಗಿದ್ದ ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿಗಳು ಹೊಸ ರಾಜಕೀಯ ಪಕ್ಷದ ಸ್ಥಾಪನೆಗೆ ಮುಂದಾಗಿರುವುದಾಗಿ ವರದಿಯಾಗಿದೆ.
ಬಾಂಗ್ಲಾದೇಶದಲ್ಲಿ ಮುಂದಿನ ವರ್ಷದ ಮಧ್ಯಭಾಗದಲ್ಲಿ ನಡೆಯುವುದೆಂದು ನಿರೀಕ್ಷಿಸಲಾಗಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷವು (ಬಿಎನ್ಪಿ) ಹಾಲಿ ಮಧ್ಯಂತರ ಸರಕಾರದ ಬೆಂಬಲದಿಂದ ಅಧಿಕಾರ ಪಡೆಯುವ ಉತ್ಸಾಹದಲ್ಲಿದೆ. ಇದಕ್ಕೆ ಪೂರಕವಾಗಿ ಹಸೀನಾ ಸರಕಾರದ ಪದಚ್ಯುತಿಗೆ ಕಾರಣವಾಗಿದ್ದ ವಿದ್ಯಾರ್ಥಿ ಸಂಘಟನೆಯ ಬೆಂಬಲ ಪಡೆಯಲು ಬಿಎನ್ಪಿ ನಿರ್ಧರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಪ್ರಮುಖರು ಕೂಡಾ ತಮ್ಮದೇ ರಾಜಕೀಯ ಪಕ್ಷ ಸ್ಥಾಪನೆಗೆ ನಿರ್ಧರಿಸಿದ್ದು ಬಿಎನ್ಪಿಯ ವಿದ್ಯಾರ್ಥಿ ಸಂಘಟನೆಯ ಕೆಂಗಣ್ಣಿಗೆ ಕಾರಣವಾಗಿದ್ದು ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಮಂಗಳವಾರ ವಿವಿ ಕ್ಯಾಂಪಸ್ನಲ್ಲಿ ನಡೆದ ಹಿಂಸಾಚಾರಕ್ಕೆ ವಿದ್ಯಾರ್ಥಿಗಳ ಎರಡು ಗುಂಪಿನ ನಡುವಿನ ವೈಮನಸ್ಯ ಹಾಗೂ ರಾಜಕೀಯ ಮೇಲಾಟ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ,
ಬಾಂಗ್ಲಾದೇಶದ ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಗುಂಪಿನ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ ಕನಿಷ್ಠ 150 ವಿದ್ಯಾರ್ಥಿಗಳು ಗಾಯಗೊಂಡಿದ್ದು ಕೆಲವರ ಸ್ಥಿತಿ ಗಂಭೀರವಾಗಿರುವುದಾಗಿ ವರದಿಯಾಗಿದೆ.
ಖುಲ್ನಾ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿವಿಯಲ್ಲಿ ಬಾಂಗ್ಲಾದೇಶ ನ್ಯಾಷನಲಿಷ್ಟ್ ಪಕ್ಷದ ಯುವ ಘಟಕವು ತಮ್ಮ ಪಕ್ಷದೊಂದಿಗೆ ಗುರುತಿಸಿಕೊಂಡ ವಿದ್ಯಾರ್ಥಿಗಳನ್ನು ವಿವಿಗೆ ನೇಮಿಸಿಕೊಳ್ಳಲು ಪ್ರಯತ್ನಿಸಿ ಆಡಳಿತ ಮಂಡಳಿಯ ಮೇಲೆ ಒತ್ತಡ ಹೇರಿದಾಗ ಆರಂಭಗೊಂಡ ಮಾತಿನ ಚಕಮಕಿ ಘರ್ಷಣೆಯ ರೂಪಕ್ಕೆ ತಿರುಗಿದೆ . ಕಳೆದ ವರ್ಷ ಶೇಖ್ ಹಸೀನಾ ಸರಕಾರದ ಪದಚ್ಯುತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ `ತಾರತಮ್ಯದ ವಿರುದ್ಧದ ವಿದ್ಯಾರ್ಥಿಗಳ ಸಂಘಟನೆ' ಇದನ್ನು ವಿರೋಧಿಸಿದಾಗ ಘರ್ಷಣೆ ನಡೆದಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.







