ಬಾಂಗ್ಲಾದೇಶ | ಸ್ವಾತಂತ್ರ್ಯ ಹೋರಾಟಗಾರ ಶೇಖ್ ಮುಜೀಬ್ ರ ಪ್ರತಿಮೆಯನ್ನು ತೆರವುಗೊಳಿಸಲಾಗಿಲ್ಲ: ಮಧ್ಯಂತರ ಸರಕಾರ ಸ್ಪಷ್ಟನೆ

PC : ANI
ಢಾಕಾ: ಜತಿಯಾ ಮುಕ್ತಿಜೊದ್ಧಾ ಮಂಡಳಿ (ಜಮುಕಾ) ಕಾಯ್ದೆಯನ್ನು ತಿದ್ದುಪಡಿಗೊಳಿಸಿರುವ ಹೊರತಾಗಿಯೂ, ‘ಬಗಬಂಧು’ ಶೇಖ್ ಮಜೀಬುರ್ ರಹಮಾನ್ ರ ಸ್ವಾತಂತ್ರ್ಯ ಹೋರಾಟಗಾರ ಪ್ರತಿಮೆಯನ್ನು ತೆರವುಗೊಳಿಸಲಾಗಿಲ್ಲ ಎಂದು ಬುಧವಾರ ಬಾಂಗ್ಲಾದೇಶ ಮಧ್ಯಂತರ ಸರಕಾರ ಸ್ಪಷ್ಟಪಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಉಸ್ತುವಾರಿ ಸರಕಾರದ ನಾಯಕ ಮುಹಮ್ಮದ್ ಯೂನುಸ್ ರ ಮುಖ್ಯ ಸಲಹೆಗಾರರ ಉಪ ಪತ್ರಿಕಾ ಕಾರ್ಯದರ್ಶಿ ಆಝಾದ್ ಮಜುಂದಾರ್, “ಶೇಖ್ ಮುಜೀಬ್ ರ ಸ್ವಾತಂತ್ರ್ಯ ಹೋರಾಟಗಾರ ಪ್ರತಿಮೆಯನ್ನು ತೆರವುಗೊಳಿಸಲಾಗಿಲ್ಲ” ಎಂದು ANI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಹಿಂದಿನ ಮುಜೀಬ್ ನೇತೃತ್ವದ ಹಂಗಾಮಿ ಸರಕಾರದಲ್ಲಿದ್ದ ಎಲ್ಲರನ್ನೂ ಸ್ವಾತಂತ್ರ್ಯ ಹೋರಾಟಗಾರರು ಎಂದು ಪರಿಗಣಿಸುವುದು ಮುಂದುವರಿಯಲಿದೆ ಎಂದು ಕಾನೂನು ಮತ್ತು ವ್ಯವಹಾರಗಳ ಸಚಿವಾಲಯದ ಸಲಹೆಗಾರ ಫಾರೂಕ್-ಇ-ಅಝಂ ಕೂಡಾ ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮುನ್ನ, ಇದುವರೆಗೆ ಅಸ್ತಿತ್ವದಲ್ಲಿದ್ದ ಜತಿಯಾ ಮುಕ್ತಿಜೊದ್ಧಾ ಮಂಡಳಿ (ಜಮುಕಾ) ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದ ಯೂನುಸ್ ಆಡಳಿತ, ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆಯಲು ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದ ಯಾರನ್ನೆಲ್ಲ ಸ್ವಾತಂತ್ರ್ಯ ಹೋರಾಟಗಾರರು ಎಂದು ಗುರುತಿಸಬೇಕು ಎಂಬ ಕುರಿತು ಹೊಸ ವ್ಯಾಖ್ಯಾನ ನೀಡಿತ್ತು.
ಹಾಲಿ ತಿದ್ದುಪಡಿ ಸುಗ್ರೀವಾಜ್ಞೆಯನ್ವಯ, ಹಂಗಾಮಿ ಮುಜೀಬ್ ನಗರ್ ಸರಕಾರದ ಸದಸ್ಯರಾಗಿದ್ದವರನ್ನೆಲ್ಲ ಇದೀಗ ವಿಮೋಚನಾ ಹೋರಾಟದ ಸಹಭಾಗಿಗಳು ಎಂದು ಗುರುತಿಸಲಾಗುತ್ತದೆ. ಅಲ್ಲದೆ, ವಿದೇಶದಲ್ಲಿದ್ದು ವಿಮೋಚನಾ ಹೋರಾಟಕ್ಕೆ ವಿಶೇಷ ಕೊಡುಗೆ ನೀಡಿ, ಈ ಹೋರಾಟದ ಕುರಿತು ಜಾಗತಿಕ ಅಭಿಪ್ರಾಯ ರೂಪಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ ವೃತ್ತಿಪರರು, ಮುಜೀಬ್ ನಗರ್ ಸರಕಾರದ ಅಧಿಕಾರಿಗಳು, ಉದ್ಯೋಗಿಗಳು, ರಾಯಭಾರಿಗಳು ಹಾಗೂ ಇನ್ನಿತರ ಸಹಾಯಕರು, ‘ಸ್ವಾಧೀನ್ ಬಾಂಗ್ಲಾ ರೇಡಿಯೊ ನಿಲಯದಲ್ಲಿ ಕಲಾವಿದರು ಹಾಗೂ ತಂತ್ರಜ್ಞರಾಗಿದ್ದವರು ಮತ್ತು ಸ್ವದೇಶ ಮತ್ತು ವಿದೇಶಗಳಲ್ಲಿ ವಿಮೋಚನಾ ಹೋರಾಟದ ಪರವಾಗಿ ಬೆಂಬಲಿಸಿದ ಎಲ್ಲ ಪತ್ರಕರ್ತರು ಹಾಗೂ ಸ್ವಾಧೀನ್ ಬಾಂಗ್ಲಾ ಫುಟ್ ಬಾಲ್ ತಂಡ ಸೇರಿದಂತೆ ನಾಲ್ಕು ಪ್ರವರ್ಗಗಳ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಸುಗ್ರೀವಾಜ್ಞೆಯಲ್ಲಿ ಗುರುತಿಸಲಾಗಿದೆ.







