ಬಾಂಗ್ಲಾದೇಶದಲ್ಲಿ ಉದ್ವಿಗ್ನತೆ ಮುಂದುವರಿದಿರುವಂತೆಯೇ ವ್ಯಕ್ತಿಯ ಮೇಲೆ ಗುಂಪು ಹಲ್ಲೆ; ವರದಿ

ಸಾಂದರ್ಭಿಕ ಚಿತ್ರ
ಢಾಕ: ಬಾಂಗ್ಲಾದೇಶದಲ್ಲಿ ಉದ್ವಿಗ್ನತೆ ಮುಂದುವರಿದಿರುವಂತೆಯೇ ವ್ಯಕ್ತಿಯೊಬ್ಬನ ಮೇಲೆ ಗುಂಪು ಹಲ್ಲೆ ನಡೆಸಿರುವ ಮತ್ತೊಂದು ಘಟನೆ ತಡವಾಗಿ ವರದಿಯಾಗಿದೆ.
ಖುಲ್ನಾ ಪ್ರಾಂತದ ಜೆನೈದಾ ಜಿಲ್ಲೆಯಲ್ಲಿ ಗೋವಿಂದ ಬಿಸ್ವಾಸ್ ಎಂಬ ರಿಕ್ಷಾ ಚಾಲಕನ ಮೇಲೆ ಶುಕ್ರವಾರ ದಾಳಿ ನಡೆದಿದೆ. ಬಿಸ್ವಾಸ್ ತನ್ನ ಮಣಿಕಟ್ಟು(ಮುಂಗೈ)ಗೆ ಕೆಂಪು ಬಣ್ಣದ ಪವಿತ್ರ ದಾರವನ್ನು ಕಟ್ಟಿಕೊಂಡಿರುವುದನ್ನು ಗಮನಿಸಿದ ಕೆಲವರು ಈತ ಭಾರತದ ಗುಪ್ತಚರ ಏಜೆನ್ಸಿಯ(ರಾ) ಜೊತೆ ಸಂಪರ್ಕದಲ್ಲಿದ್ದಾನೆ ಎಂದು ವದಂತಿ ಹಬ್ಬಿಸಿದ್ದಾರೆ. ಇದರ ಬೆನ್ನಲ್ಲೇ ಅಲ್ಲಿಗೆ ಬಂದ ಗುಂಪೊಂದು ಬಿಸ್ವಾಸ್ ನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದು ಇದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಬಿಸ್ವಾಸ್ ರ ಗಂಟಲು, ಎದೆಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಳಿಕ ಅವರನ್ನು ಜೆನೈದಾ ಸದರ್ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಈತನ ಮೊಬೈಲ್ ಫೋನ್ ನಲ್ಲಿ ಭಾರತದ ರಿಸರ್ವ್ ಬ್ಯಾಂಕ್ ಗೆ ಸಂಬಂಧಿಸಿದ ಹಲವು ವಾಟ್ಸ್ಯಾಪ್ ವಹಿವಾಟುಗಳು ಪತ್ತೆಯಾಗಿವೆ. ಅಲ್ಲದೆ ಬಿಸ್ವಾಸ್ ಗೆ ಭಾರತದ ವ್ಯಕ್ತಿಯೊಬ್ಬರಿಂದ ಕರೆಯೂ ಬಂದಿದೆ. ಭಾರತದ ಪ್ರಜೆ ಆಕಾಶ್ ಎಂಬಾತ ತನಗೆ ಪರಿಚಿತ ಎಂದು ಬಿಸ್ವಾಸ್ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.
ಬಿಸ್ವಾಸ್ ಬಂಧನವನ್ನು ಜೆನೈದಾ ಸದರ್ ಪೊಲೀಸ್ ಠಾಣೆಯ ಅಧಿಕಾರಿ ದೃಢಪಡಿಸಿದ್ದು, ಬಿಸ್ವಾಸ್ ಹಲವಾರು ವರ್ಷ ಭಾರತದಲ್ಲಿ ವಾಸಿಸುತ್ತಿದ್ದಾಗಿ ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ. ಭಾರತೀಯ ಏಜೆನ್ಸಿಗಳೊಂದಿಗೆ ಬಿಸ್ವಾಸ್ ಸಂಪರ್ಕದಲ್ಲಿದ್ದ ಎಂಬ ಆರೋಪದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.







