Bangladesh| ಉಸ್ಮಾನ್ ಹಾದಿ ಹತ್ಯೆ ಬೆನ್ನಲ್ಲೆ ಮತ್ತೊಬ್ಬ ಯುವ ನಾಯಕನ ಮೇಲೆ ಗುಂಡಿನ ದಾಳಿ

ಷರೀಫ್ ಉಸ್ಮಾನ್ ಹಾದಿ | Photo Credit : X \ @thewirepak
ಖುಲ್ನಾ (ಬಾಂಗ್ಲಾದೇಶ): ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಹತ್ಯೆ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿರುವ ಮಧ್ಯೆ, ಬಾಂಗ್ಲಾದೇಶದ National Citizen Party(NCP)ಯ ಯುವ ನಾಯಕನ ಮೇಲೆ ಖುಲ್ನಾದಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ.
NCPಯ ಕಾರ್ಮಿಕ ಘಟಕದ ನಾಯಕರಾಗಿರುವ ಮುಹಮ್ಮದ್ ಮೊತಾಲೆಬ್ ಸಿಕ್ದರ್ ಅವರ ಮೇಲೆ ಮಧ್ಯಾಹ್ನ ಸುಮಾರು 12.15ರ ವೇಳೆಗೆ ಖುಲ್ನಾದ ಸೋನದಂಗಾ ಪ್ರದೇಶದಲ್ಲಿನ ಅವರ ನಿವಾಸದಲ್ಲಿ ಗುಂಡು ಹಾರಿಸಲಾಗಿದೆ. ಗುಂಡು ತಲೆಬುರುಡೆಗೆ ತಗುಲಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾರಂಭದಲ್ಲಿ ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದರೂ, ಸದ್ಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಿಕ್ದರ್ ಅವರು ಪಕ್ಷದ ಕಾರ್ಮಿಕ ಸಂಘಟನೆಯಾದ ‘ಜಾತಿಯಾ ಶ್ರಮಿಕ್ ಶಕ್ತಿ’ಯ ಕೇಂದ್ರ ಸಂಘಟಕರಾಗಿಯೂ ಖುಲ್ನಾ ವಿಭಾಗೀಯ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಮುಂಬರುವ ದಿನಗಳಲ್ಲಿ ಖುಲ್ನಾದಲ್ಲಿ ನಡೆಯಲಿರುವ ವಿಭಾಗೀಯ ಕಾರ್ಮಿಕ ರ್ಯಾಲಿಯ ಸಿದ್ಧತೆಯಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ಎನ್ಸಿಪಿ ನಾಯಕ ಸೈಫ್ ನೆವಾಝ್ ತಿಳಿಸಿದ್ದಾರೆ.
ಈ ದಾಳಿ, ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ಕೆಲವೇ ದಿನಗಳ ನಂತರ ನಡೆದಿದೆ. ಹಾದಿಯನ್ನು ಡಿಸೆಂಬರ್ 12ರಂದು ಢಾಕಾದ ಬಿಜೋಯ್ನಗರ ಪ್ರದೇಶದಲ್ಲಿ ಬ್ಯಾಟರಿ ಚಾಲಿತ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪರಿಚಿತ ದಾಳಿಕೋರರು ಹತ್ತಿರದಿಂದ ಗುಂಡು ಹಾರಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಮೊದಲು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರಕ್ಕೆ ಕಳುಹಿಸಲಾಗಿತ್ತು.
ಸಿಂಗಾಪುರದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದರೂ, ವೈದ್ಯಕೀಯ ಪ್ರಯತ್ನಗಳು ಫಲಕಾರಿಯಾಗದೆ ಡಿಸೆಂಬರ್ 18ರಂದು ಹಾದಿ ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಅವರ ಸಾವಿನ ಬಳಿಕ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಮತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.







