Bangladesh | ಇನ್ನೋರ್ವ ವ್ಯಕ್ತಿಯ ಹತ್ಯೆಗೆ ಭಾರತ ಖಂಡನೆ

ರಣಧೀರ್ ಜೈಸ್ವಾಲ್ | Photo Credit : PTI
ಹೊಸದಿಲ್ಲಿ,ಡಿ.26: ಬಾಂಗ್ಲಾದೇಶದಲ್ಲಿ ಇನ್ನೋರ್ವ ಹಿಂದೂ ವ್ಯಕ್ತಿಯ ಹತ್ಯೆಯನ್ನು ಭಾರತ ಶುಕ್ರವಾರ ಬಲವಾಗಿ ಖಂಡಿಸಿದ್ದು, ಅಲ್ಪಸಂಖ್ಯಾತ ಸಮುದಾಯದವರ ಮೇಲೆ ಇತ್ತೀಚೆಗೆ ನಡೆಯುತ್ತಿರುವ ದಾಳಿಗಳು ಅತ್ಯಂತ ಆತಂಕಕಾರಿ ಎಂದು ಬಣ್ಣಿಸಿದೆ ಹಾಗೂ ಇಂತಹ ಹಿಂಸಾಚಾರಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲವೆಂದು ಎಚ್ಚರಿಕೆ ನೀಡಿದೆ.
ಬಾಂಗ್ಲಾದೇಶದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಗಡಿಯಾಚೆ ನಡೆಯುತ್ತಿರುವ ಘಟನೆಗಳ ಬಗ್ಗೆ ಹೊಸದಿಲ್ಲಿಯು ಗಂಭೀರವಾಗಿ ಗಮನಿಸುತ್ತಿದೆಯೆಂದು ಹೇಳಿದರು. ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಗೆ ಕಾರಣರಾದವರನ್ನು ಗುರುತಿಸಿ ಶಿಕ್ಷಿಸುವಂತೆ ಅವರು ಬಾಂಗ್ಲಾ ಸರಕಾರವನ್ನು ಆಗ್ರಹಿಸಿದರು.
‘‘ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಿರಂತರವಾಗಿ ದ್ವೇಷದ ಕೃತ್ಯಗಳು ನಡೆಯುತ್ತಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂದೂ ಯುವಕನೊಬ್ಬನ ಕಗ್ಗೊಲೆಯನ್ನು ನಾವು ಖಂಡಿಸುತ್ತೇವೆ ಹಾಗೂ ಈ ಅಪರಾಧ ಕೃತ್ಯದ ಹಿಂದಿರುವ ಸೂತ್ರಧಾರಿಗಳನ್ನು ಕಾನೂನುಕ್ರಮಕ್ಕೆ ಒಳಪಡಿಸುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ’’ ಎಂದು ಜೈಸ್ವಾಲ್ ಹೇಳಿದ್ದಾರೆ.
ಬಾಂಗ್ಲಾ ದೇಶದಲ್ಲಿ ಹಿಂದೂ ವ್ಯಕ್ತಿಯೊಬ್ಬನು ಗುಂಪು ಥಳಿತಕ್ಕೊಳಗಾಗಿ ಸಾವನ್ನಪ್ಪಿದ ಮರುದಿನ ಭಾರತ ಈ ಹೇಳಿಕೆಯನ್ನು ನೀಡಿದೆ. ಇತ್ತೀಚಿನ ವಾರಗಳಲ್ಲಿ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ಹಿಂಸಾಚಾರದ ಘಟನೆಗಳು ಹೆಚ್ಚುತ್ತಿರುವ ನಡುವೆಯೇ ಈ ಹತ್ಯೆನಡೆದಿದೆ.
ಬಾಂಗ್ಲಾ ರಾಜಧಾನಿ ಢಾಕಾದಿಂದ 145 ಕಿ.ಮೀ. ದೂರದಲ್ಲಿರುವ ರಾಜಬರಿಯ ಪಾಂಗ್ ಶಾ ಉಪಜಿಲ್ಲೆಯಲ್ಲಿ ಅಮೃತ್ ಮೊಂಡಾಲ್ ಎಂಬ ವ್ಯಕ್ತಿಯನ್ನು ಸ್ಥಳೀಯರು ಥಳಿಸಿ ಹತ್ಯೆಗೈದಿದ್ದರು.
ಮೃತ ಮೊಂಡಾಲ್ ಸುಲಿಗೆ ಮತ್ತಿತರ ಅಕ್ರಮ ಚಟುವಟಿಕೆಗಳಲ್ಲಿ ನಿರತವಾಗಿರುವ ಕ್ರಿಮಿನಲ್ ಗ್ಯಾಂಗೊಂದರ ನಾಯಕನೆಂದು ಶಂಕಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ದಿನದಂದು ಮೊಂಡಾಲ್ ಹಾಗೂ ಆತನ ಸಹಚರರು, ಸ್ಥಳೀಯ ನಿವಾಸಿಯೊಬ್ಬನಿಂದ ಹಣವನ್ನು ಸುಲಿಗೆ ಮಾಡಲು ಯತ್ನಿಸಿದ್ದರು. ಆಗ ಸ್ಥಳೀಯರು, ಅವರೊಂದಿಗೆ ಘರ್ಷಣೆಗಿಳಿದರು ಹಾಗೂ ಮೊಂಡಾಲ್ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡ ಮೊಂಡಾಲ್ ಆಸ್ಪತ್ರೆಯಲ್ಲಿ ಗುರುವಾರ ಮುಂಜಾನೆ ಕೊನೆಯುಸಿರೆಳೆದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಮೊಂಡಲ್ ನ ಅನುಚರರರು ಸ್ಥಳದಿಂದ ಪರಾರಿಯಾಗಿದ್ದು, ಓರ್ವನನನ್ನು ಬಂಧಿಸಲಾಗಿದೆ ಮತ್ತು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊಂಡಲ್ ವಿರುದ್ಧ ಈ ಹಿಂದೆ ಕೊಲೆ ಸೇರಿದಂತೆ ಕನಿಷ್ಠ ಎರಡು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ದಿನಗಳ ಮೈಮೆನ್ ಸಿಂಗ್ ಎಂಬಲ್ಲಿ 25 ವರ್ಷದ ಹಿಂದೂ ಯುವಕ, ಕಾರ್ಖಾನೆ ಕಾರ್ಮಿಕ ದೀಪು ಚಂದ್ರ ದಾಸ್ ಎಂಬವರನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆಯು ವ್ಯಾಪಕ ಜನಾಕ್ರೋಶವನ್ನು ಸೃಷ್ಟಿಸಿತ್ತು.







