ಬಾಂಗ್ಲಾದೇಶ ವಾಯುಪಡೆಯ ತರಬೇತಿ ಜೆಟ್ ವಿಮಾನ ಶಾಲೆಗೆ ಢಿಕ್ಕಿ: ಓರ್ವ ಮೃತ್ಯು, ನಾಲ್ವರಿಗೆ ಗಾಯ

Photo credit: indiatoday.in
ಢಾಕಾ: ಬಾಂಗ್ಲಾದೇಶ ವಾಯುಪಡೆಯ ತರಬೇತಿ ಜೆಟ್ವೊಂದು ಸೋಮವಾರ ಮಧ್ಯಾಹ್ನ ಢಾಕಾದ ಉತ್ತರ ಪ್ರದೇಶದಲ್ಲಿರುವ ಶಾಲಾ ಆವರಣಕ್ಕೆ ಢಿಕ್ಕಿ ಹೊಡೆದ ಘಟನೆ ನಡೆದಿದ್ದು, ಕನಿಷ್ಠ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಅಪಘಾತದ ವೇಳೆ ಮೈಲ್ಸ್ಟೋನ್ ಶಾಲೆ ಮತ್ತು ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಹಾಜರಿದ್ದರು. ಸೇನೆಯ ಮೂಲಗಳು ಹಾಗೂ ಅಗ್ನಿಶಾಮಕ ಸೇವೆಗಳ ಪ್ರಾಥಮಿಕ ವರದಿಯ ಪ್ರಕಾರ, ಬಾಂಗ್ಲಾದೇಶ ವಾಯುಪಡೆಯ ಎಫ್-7 ಬಿಜಿಐ ತರಬೇತಿ ವಿಮಾನವೊಂದು ತಾಂತ್ರಿಕ ದೋಷದಿಂದ ನೇರವಾಗಿ ಶಾಲಾ ಆವರಣದೊಳಗೆ ಪತನಗೊಂಡಿದೆ ಎಂದು ತಿಳಿದು ಬಂದಿದೆ.
ಬಾಂಗ್ಲಾದೇಶ ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗ ಹೊರಡಿಸಿದ ಮಾಹಿತಿ ಪ್ರಕಾರ, ಮಿಲಿಟರಿ ತುರ್ತು ಸೇವೆಗಳು ತಕ್ಷಣ ಸ್ಪಂದಿಸಿವೆ.
"ಈ ಅಪಘಾತದಲ್ಲಿ ಕನಿಷ್ಠ ಒಬ್ಬರ ಸಾವು ಸಂಭವಿಸಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ," ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿ ಲಿಮಾ ಖಾನ್ ತಿಳಿಸಿದ್ದಾರೆ.
ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಸೇನಾ ಪಡೆಗಳು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು, ಪರಿಶೀಲನೆ ಹಾಗೂ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿಯಲು ವಿಶೇಷ ತನಿಖಾ ತಂಡ ರಚಿಸಲಾಗಿದೆ.
ಘಟನೆ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಶಾಲಾ ಆಡಳಿತ ಮತ್ತು ಸ್ಥಳೀಯ ನಾಗರಿಕರು ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.







