ಬಾಂಗ್ಲಾದೇಶ | ವರ್ಷಾಂತ್ಯದೊಳಗೆ ಚುನಾವಣೆ ನಡೆಸಬೇಕು: ಬಾಂಗ್ಲಾದೇಶ ಸೇನಾ ಮುಖ್ಯಸ್ಥ
ಆಂತರಿಕ ಬಿಕ್ಕಟ್ಟಿನಿಂದ ಕಾನೂನು ಮತ್ತು ಸುವ್ಯವಸ್ಥೆ ಕುಸಿಯುತ್ತಿದೆ ಎಂದು ಎಚ್ಚರಿಸಿದ ಜನರಲ್ ವಾಕರ್-ಉಝ್-ಝಮಾನ್

ಜನರಲ್ ವಾಕರ್-ಉಝ್-ಝಮಾನ್ | Photo : Rueters
ಢಾಕಾ: ದೇಶದೊಳಗಿನ ಆಂತರಿಕ ಬಿಕ್ಕಟ್ಟಿನಿಂದ ಕಾನೂನು ಮತ್ತು ಸುವ್ಯವಸ್ಥೆ ಕುಸಿಯುತ್ತಿದೆ ಎಂದು ಎಚ್ಚರಿಸಿರುವ ಬಾಂಗ್ಲಾದೇಶ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಝ್-ಝಮಾನ್, ಈಗಿನ ಅಶಾಂತಿಯ ಸೃಷ್ಟಿಕರ್ತರು ನಾವೇ ಎಂದು ಹೇಳಿದ್ದಾರೆ.
ಮಂಗಳವಾರ 2009ರ ಬಾಂಗ್ಲಾದೇಶ ರೈಫಲ್ಸ್ ದಂಗೆ ಸ್ಮರಣಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದು ವೇಳೆ ದೇಶವು ರಾಜಕೀಯ ಬಿಕ್ಕಟ್ಟಿನಲ್ಲೇ ಮುಳುಗಿದರೆ, ಕಳೆದ ವರ್ಷದ ಆಗಸ್ಟ್ ನಲ್ಲಿ ಹಿಂದಿನ ಸರಕಾರವನ್ನು ಪದಚ್ಯುತಿಗೊಳಿಸಿದ್ದ ವಿದ್ಯಾರ್ಥಿಗಳ ಹೋರಾಟವು ದೇಶದ ಪಾಲಿಗೆ ಮುಳುವಾಗಬಲ್ಲದು ಎಂದು ಎಚ್ಚರಿಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
“ನೀವು ನಿಮ್ಮ ಭಿನ್ನಾಭಿಪ್ರಾಯಗಳನ್ನು, ಎಲ್ಲ ಕೇಡಿನ ಯೋಚನೆಗಳನ್ನು ಮರೆತು ದೇಶದ ಏಳಿಗೆ ಹಾಗೂ ರಾಷ್ಟ್ರೀಯ ಸಮಗ್ರತೆಗೆ ಒಗ್ಗಟ್ಟಾಗಿ ದುಡಿಯಿರಿ” ಎಂದು ಕರೆ ನೀಡಿದ ವಾಕರ್-ಉಝ್-ಝಮಾನ್, “ಒಂದು ವೇಳೆ ನೀವು ನಿಮ್ಮ ಭಿನ್ನಾಭಿಪ್ರಾಯಗಳನ್ನು ಮರೆಯದಿದ್ದರೆ ಹಾಗೂ ನಿಮ್ಮೊಳಗೇ ಕಾದಾಡುವುದು, ಹಸ್ತಕ್ಷೇಪ ನಡೆಸುವುದನ್ನು ಮುಂದುವರಿಸಿದರೆ, ದೇಶದ ಸ್ವಾತಂತ್ರ್ಯ ಹಾಗೂ ಸಮಗ್ರತೆ ಅಪಾಯಕ್ಕೀಡಾಗಲಿದೆ” ಎಂದು ಎಚ್ಚರಿಸಿದ್ದಾರೆ.
ದೇಶದಲ್ಲಿ ಮಿತಿಮೀರಿರುವ ಹಿಂಸಾಚಾರಕ್ಕೆ ವಿದ್ಯಾರ್ಥಿ ಸಂಘಟನೆಗಳಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ ಹಾಗೂ ಜಮಾತ-ಇ-ಇಸ್ಲಾಮಿ ರವಿವಾರ ಪರಸ್ಪರ ದೂಷಣೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಸೇನಾ ಮುಖ್ಯಸ್ಥ ವಾಕರ್-ಉಝ್-ಝಮಾನ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ.







