Bangladesh Crisis | ಬಾಂಗ್ಲಾ ಬಿಕ್ಕಟ್ಟು ಉಲ್ಬಣ: ಸ್ಫೋಟಕ್ಕೆ ಒಬ್ಬ ಬಲಿ

ಸಾಂದರ್ಭಿಕ ಚಿತ್ರ | Photo Credit : PTI
ಢಾಕಾ: ಬಾಂಗ್ಲಾದೇಶದ ರಾಜಧಾನಿಯ ಮೊಗ್ ಬಜಾರ್ ಪ್ರದೇಶದಲ್ಲಿ ಗುಂಪೊಂದು ಬುಧವಾರ ರಾತ್ರಿ ಫ್ಲೈಓವರ್ ನಿಂದ ಕಚ್ಚಾ ಸ್ಫೋಟಕವನ್ನು ಎಸೆದಾಗ ಸಂಭವಿಸಿದ ದುರಂತದಲ್ಲಿ ಒಬ್ಬ ಮೃತಪಟ್ಟಿದ್ದು, ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ.
ಮೊಗ್ಬಜಾರ್ ನ ಸ್ವಾತಂತ್ರ್ಯ ಯೋಧರ ಸ್ಮಾರಕದ ಎದುರಿನ ಮೇಲ್ಸೇತುವೆಯಲ್ಲಿ ಈ ಘಟನೆ ಸಂಭವಿಸಿದೆ. ಸೇತುವೆ ಮೇಲಿನಿಂದ ಎಸೆಯಲ್ಪಟ್ಟ ಬಾಂಬ್ ಸ್ಫೋಟಗೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನೆಯಲ್ಲಿ ಸಿಯಾಮ್ ಎಂಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು, ಬಳಿಕ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
"ಫ್ಲೈಓವರ್ ನಿಂದ ವ್ಯಕ್ತಿಯೊಬ್ಬ ಕಾಕ್ ಟೇಲ್ ಬಾಂಬ್ ಎಸೆದಿದ್ದು, ಇದು ಸಂತ್ರಸ್ತ ವ್ಯಕ್ತಿಯ ತಲೆ ಮೇಲೆ ಬಿದ್ದು ಸ್ಫೋಟಗೊಂಡಿದೆ. ಅದು ತಲೆಯನ್ನು ಸಿಡಿಸಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಿಯಾಮ್ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಆ ಜಾಗದಲ್ಲಿ ಹಾದು ಹೋಗುತ್ತಿದ್ದ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ತಕ್ಷಣಕ್ಕೆ ಆತನ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ಸಂಬಂಧಿಕರು ದೃಢಪಡಿಸಿದರು.
ಘಟನೆ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ ಬೆನ್ನಲ್ಲೇ ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ. ಸ್ಫೋಟಕವನ್ನು ಎಸೆದ ಆರೋಪಿಗಳು ತಕ್ಷಣ ತಪ್ಪಿಸಿಕೊಂಡಿದ್ದಾರೆ. ದಾಳಿಯ ಉದ್ದೇಶ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ರಮ್ನಾ ವಿಭಾಗದ ಪೊಲೀಸ್ ಉಪ ಆಯುಕ್ತ ಮಸೂದ್ ಅಲಮ್ ಹೇಳಿದ್ದಾರೆ.







